ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣದ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಜನರಿಗೆ ನಿಖರವಾದ ವಾಸ್ತವಾಂಶಗಳನ್ನು ತಿಳಿಸುವುದೇ ನಮ್ಮ ಸರ್ಕಾರದ ಏಕೈಕ ಉದ್ದೇಶ” ಎಂದು ಹೇಳಿದರು.
ಶನಿವಾರ (ಸೆ. 27) ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಎಸ್‌ಐಟಿ ರಚನೆಯಿಂದ ನನ್ನ ಮೇಲಿದ್ದ ಕಳಂಕ ಕಳೆಯುತ್ತಿದೆ ಎಂದು ವೀರೇಂದ್ರ ಹೆಗಡೆ ಹೇಳಿದ್ದಾರೆ. ಆದರೆ ತನಿಖಾ ವರದಿ ಹೊರಬರುವವರೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸರಿಯಾದ ಸಂದರ್ಭ ಬಂದ ನಂತರ ಮಾತ್ರ ಮಾತನಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಅವರು ಮುಂದುವರೆದು, “ವೀರೇಂದ್ರ ಹೆಗಡೆ ಅವರ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ವರದಿ ಬರುವ ಮುನ್ನ ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ. ರಾಜಕೀಯವಾಗಿ ಯಾರು ಏನು ಬೇಕಾದರೂ ಹೇಳಬಹುದು. ಆದರೆ ನಾನು ಸರ್ಕಾರದ ಪ್ರತಿನಿಧಿ ಆಗಿರುವುದರಿಂದ ಅಂಥ ಹೇಳಿಕೆ ನೀಡಲು ಸಾಧ್ಯವಿಲ್ಲ. ತನಿಖಾ ವರದಿ ಬಂದ ನಂತರ ಮುಖ್ಯಮಂತ್ರಿ ಅಥವಾ ಗೃಹ ಸಚಿವರು ಅಧಿಕೃತ ಹೇಳಿಕೆ ನೀಡುತ್ತಾರೆ. ನಂತರ ನಾನು ಮಾತನಾಡುತ್ತೇನೆ” ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣದಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು ಇದರಿಂದ ಸತ್ಯವೇನೆಂಬುದು ಹೊರಬರುತ್ತಿದೆ. ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದರು.
‘ಎಸ್ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯವಾಗಿ ಮಾತನಾಡುತ್ತಾ ಇದ್ದೇನೆ. ಸರ್ಕಾರಕ್ಕೆ ನಾನು ಆಭಾರಿ, ಎಸ್ಐಟಿ ಮಾಡಿದ ಕಾರಣ ಸತ್ಯ ಹೊರಗೆ ಬರುತ್ತಿದ. ನಮ್ಮ ಹೊಳಪು ಹಾಗೇ ಉಳಿದಿದೆ, ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಾವು ಸತ್ಯದಿಂದ ಇದ್ದೇವೆ, ಮುಂದೆಯೂ ಹಾಗೆ ಇರುತ್ತೇವೆ ಎಂದು ಹೆಗ್ಗಡೆ ಹೇಳಿದ್ದಾರೆ.