ಗಂಗಾ ಆರತಿ ಮಾದರಿಯಲ್ಲಿ 92 ಕೋಟಿ ರೂ ವೆಚ್ಚದ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿದ್ಯುಕ್ತ ಚಾಲನೆ ನೀಡಿದರು. ವೈದಿಕ ಭಾನುಪ್ರಕಾಶ್ ಶರ್ಮಾ ಅವರ ಮಾರ್ಗದರ್ಶನದಲ್ಲಿ 50ಕ್ಕೂ ಹೆಚ್ಚಿನ ವೈದಿಕರು ಮಂತ್ರೋಚ್ಚಾರಣೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಮೊದಲಿಗೆ ಚಮರಿ ಬೀಸುವ ಮೂಲಕ ಆರಂಭಗೊಂಡ ಆರತಿ, ನಂತರ ಧೂಪಾರತಿ, ಪುಷ್ಪಾರತಿ, ದೀಪಾರತಿ, ದೀಪಗುಚ್ಛಾರತಿ ಮೂಲಕ ಮುಂದುವರಿದು ಕೊನೆಗೆ ಮಂಗಳಾರತಿಯಿಂದ ಸಮಾರೋಪವಾಯಿತು. “ಜಯ ಜಯ ಕಾವೇರಿ… ಅಮ್ಮ ಜಯ ಜಯ ಕಾವೇರಿ…” ಎಂಬ ಹಾಡಿನ ಭಾವಪೂರ್ಣ ಗಾಯನ ಎಲ್ಲರನ್ನೂ ಭಕ್ತಿ ರಸದಲ್ಲಿ ಮಿಂದೇಳುವಂತೆ ಮಾಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಕಾವೇರಿಯನ್ನು ಕನ್ನಡಿಗರ ಭಾಗ್ಯ ದೇವತೆ ಎಂದು ಕೊಂಡಾಡಿದರು. ರೈತರ ಜೀವನದ ಆಧಾರವೇ ಕಾವೇರಿ ಎಂದು ಅವರು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ 10 ಸಾವಿರ ಜನ ಸೇರಿ ಕಾವೇರಿ ಆರತಿ ವೀಕ್ಷಿಸುವಂತೆ ಯೋಜನೆ ಮಾಡಲಾಗಿದ್ದರೂ, ಕೆಲವು ಅಡೆತಡೆಗಳಿಂದಾಗಿ ಅದು ಸಾಧ್ಯವಾಗಲಿಲ್ಲವೆಂದು ತಿಳಿಸಿದರು. ಇಂದು ಸಾಂಕೇತಿಕವಾಗಿ ಕಾವೇರಿ ಆರತಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಆಗಮ ಶಾಸ್ತ್ರದ ಪ್ರಕಾರವೇ ಆರತಿ ನಡೆಯುತ್ತಿದೆ ಎಂದು ಹೇಳಿದರು. ಗಂಗಾ ಆರತಿಯನ್ನು ಚಲುವರಾಯಸ್ವಾಮಿ ತಂಡ ನೇರವಾಗಿ ವೀಕ್ಷಿಸಿ ವರದಿ ನೀಡಿರುವ ಹಿನ್ನೆಲೆಯಲ್ಲಿ, ಅದನ್ನು ಮಾದರಿಯಾಗಿ ಕಾವೇರಿ ಆರತಿ ರೂಪಿಸಲಾಗಿದೆ ಎಂದರು.
ಯಾವುದೇ ಪ್ರಾರ್ಥನೆ ಯಾರೊಬ್ಬರ ಮನೆಯ ಸ್ವತ್ತಲ್ಲ, ಎಲ್ಲರಿಗೂ ಹಕ್ಕಾಗಿದೆ. ಯಾರೇ ತಡೆದರೂ ನಾವು ಈ ಧಾರ್ಮಿಕ ಸಂಸ್ಕೃತಿ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ಕನ್ನಡ ನಾಡಿನ ಜೀವನದಿ. ಕೇರಳ, ತಮಿಳುನಾಡು ಹಾಗೂ ರಾಜ್ಯದ ನಾನಾ ಭಾಗಗಳಿಂದ ಕೆಆರ್ ಎಸ್ ವೀಕ್ಷಣೆಗೆ ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕಾವೇರಿ ಆರತಿ ವೀಕ್ಷಿಸಲು ಆಗಮಿಸಲಿದ್ದಾರೆ. ಹೀಗಾಗಿ ಅವರಿಗೆ ಲಾಡು ವಿತರಣೆ ವ್ಯವಸ್ಥೆ ಮಾಡಲಾಗಿದೆ. ಸಂಪ್ರದಾಯಗಳನ್ನು ಒಳಗೊಂಡ ಕಾವೇರಿ ಆರತಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ನೆರವೇರುತ್ತಿದ್ದು, ಇದಕ್ಕೆ ಕೃಷ್ಣರಾಜಸಾಗರ ಸಾಕ್ಷಿಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಸಿದ್ಧಗಂ ಗಾ ಮಠದ ಸಿದ್ಧಲಿಂ ಗ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸೋಮೇ ಶ್ವರನಾಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಮೇಶ ಬಂಡಿಸಿದ್ದೇ ಗೌಡ, ದರ್ಶನ್ ಪುಟ್ಟಣ್ಣಯ್ಯ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.