Menu

ಎತ್ತಿನಹೊಳೆ ಯೋಜನೆಯ ಬೃಹತ್ ಮೇಲ್ಗಾಲುವೆ ವೀಕ್ಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ettinahole

ತುಮಕೂರು (ಗುಬ್ಬಿ): ಎತ್ತಿನಹೊಳೆ ಯೋಜನೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಬಳಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಪರಿವೀಕ್ಷಣೆ ಮಾಡಿದರು.

ಇದು ವಿಶ್ವದಲ್ಲೇ ಅತಿ ಎತ್ತರ (40 ಮೀಟರ್) ಏಷ್ಯಾದಲ್ಲೇ ಅತಿ ಉದ್ದದ (10.47 ಕಿ. ಮೀ.) ಮೇಲ್ಗಾಲುವೆ ಇದಾಗಿದೆ. ಮಣ್ಣಿನ ಸಾಮರ್ಥ್ಯಕ್ಕೆ ತಕ್ಕಂತೆ ಓಪನ್ ಹಾಗೂ ಪೈಲ್ ವಿನ್ಯಾಸಗಳ ಮೂಲಕ ಅಡಿಪಾಯ ನಿರ್ಮಿಸಲಾಗಿದೆ. ಒಟ್ಟು 40 ಮೀ. ಎತ್ತರದಲ್ಲಿ ಬೃಹತ್ ಮೇಲ್ಗಾಲುವೆ ಮೂಲಕ ನೀರು ಹರಿಯಲಿದೆ.

ವಿಶೇಷ ಮಾದರಿಯ Joint Treatment Methodology ಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಪರಿಶೀಲಿಸಿ ಕಾಮಗಾರಿ ಮಾಡಲಾಗಿದೆ. ಅತ್ಯಂತ ಕನಿಷ್ಠ ಅವಧಿಯಲ್ಲಿ ಎತ್ತರ ಮಟ್ಟದಲ್ಲಿ ಮಿತ ಕಾರ್ಮಿಕರ ಬಳಕೆ ಹಾಗೂ ಸುರಕ್ಷತೆಗೆ ಆದ್ಯತೆ ಕೊಟ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಅಕ್ವಾಡೆಕ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ಈ ಯೋಜನೆಗೆ ಇತ್ತೀಚೆಗೆ ರಾಷ್ಟ್ರಮಟ್ಟದ ISDA ಸಂಸ್ಥೆ ನೀಡುವ INFRACON NATIONAL AWARD -IINA-2025 ಪ್ರಶಸ್ತಿ ಲಭಿಸಿದೆ.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಈ ಯೋಜನೆ ಮೂಲಕ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಅವರ ಬದುಕಿನಲ್ಲೇ ಒಂದು ಇತಿಹಾಸ ಬರೆದಿದ್ದಾರೆ. ಇದು ವಿಶ್ವದ ಗಮನ ಸೆಳೆದಿರುವ ಯೋಜನೆಯಾಗಿದೆ” ಎಂದು ತಿಳಿಸಿದರು.

ನಾನು ಈ ಹಿಂದೆ ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಯೋಜನೆ ಸ್ವರೂಪ ಬದಲಿಸಿದ್ದೆ. ಈ ಹಿಂದೆ ಯುಕೆಪಿ ಯೋಜನೆಯಲ್ಲಿ ಇದೇ ಮಾದರಿಯಲ್ಲಿ ಕಾಮಗಾರಿ ಮಾಡಿದ್ದೆವು. ಅದರಲ್ಲಿ 500 ಕ್ಯೂಸೆಕ್ ನೀರು ಹರಿಯುತ್ತಿತ್ತು. ಈ ಯೋಜನೆಯಲ್ಲಿ 3600 ಕ್ಯೂಸೆಕ್ ನೀರು ಹರಿಯಲಿದೆ. ಚೀನಾದಲ್ಲಿ ಇರುವ ಮೇಲ್ಗಾಲುವೆ 12 ಕಿ.ಮೀ ಉದ್ದ ಇದೆಯಾದರೂ ಅದರ ಎತ್ತರ 13 ಮೀಟರ್ ಮಾತ್ರ ಇದೆ. ನಮ್ಮ ಈ ಮೇಲ್ಗಾಲುವೆ 10.47 ಕಿ.ಮೀ ಉದ್ದ ಹಾಗೂ 40 ಮೀಟರ್ ಎತ್ತರ ಇದೆ. ಈ ಕಾಮಗಾರಿಗೆ 1203 ಕೋಟಿ ವೆಚ್ಚ ಮಾಡಲಾಗಿದೆ” ಎಂದು ವಿವರಿಸಿದರು.

“ಯೋಜನೆಯನ್ನು ನಾವು ದೇಶಕ್ಕೆ ಮಾದರಿಯಾಗಿ ಪರಿಚಯಿಸಬೇಕು. ಈ ಯೋಜನೆ ಮಾಡಿರುವ ಅಧಿಕಾರಿಗಳು, ತಂತ್ರಜ್ಞರು, ಗುತ್ತಿಗೆದಾರರಿಗೆ ವಿಧಾನಸೌಧದಲ್ಲಿ ಸೂಕ್ತ ರೀತಿಯಲ್ಲಿ ಗೌರವ ನೀಡಲಾಗುವುದು. ಬೇರೆ ಶಾಸಕರು ಹಾಗೂ ಸಚಿವರನ್ನು ಕರೆಸಿ ಒಂದು ಕಾರ್ಯಕ್ರಮ ಮಾಡಿ ಈ ಕಾಮಗಾರಿಯನ್ನು ಪರಿಚಯಿಸಲಾಗುವುದು” ಎಂದು ತಿಳಿಸಿದರು.

ಹೇಮಾವತಿ ನೀರಿನ ವಿಚಾರವಾಗಿ ಕೇಳಿದಾಗ, “ಈ ಬಾರಿ ಹೆಚ್ಚು ನೀರು ಸಂಗ್ರಹವಾಗಿದ್ದು, ಕಾಲುವೆಗಳಲ್ಲಿ ನೀರು ಹರಿಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *