ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಓದಿ ಟಾಪರ್ ಸ್ಟೂಡೆಂಟ್ ಆಗಿ ಗುರುತಿಸಿಕೊಂಡ ಆಂಚಲ್ ಕುಮಾರಿ (26) ಜೈನ ಸನ್ಯಾಸ ದೀಕ್ಷೆ ಸ್ವೀಕರಿಸುವ ಮೂಲಕ ಸಂಸಾರ ಬಂಧನದಿಂದ ದೂರ ಹೋಗಿದ್ದಾರೆ.
ಆಂಚಲ್ ಮುಂದೆ ಉಜ್ವಲ ಭವಿಷ್ಯ, ಐಷಾರಾಮಿ ಬದುಕು, ಸಂಪತ್ತು, ಉತ್ತಮ ಉದ್ಯೋಗ ಎಲ್ಲವೂ ಇತ್ತು. ಆದರೆ ಅವೆಲ್ಲವನ್ನೂ ತ್ಯಜಿಸಿ ಆಕೆ ಆಧ್ಯಾತ್ಮದ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಂಚಲ್ ಕುಮಾರಿ ದಾವಣಗೆರೆ ಚೌಕಿಪೇಟೆಯ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿ. ಮುಕೇಶ್ ಅವರಿಗೆ ಮೂವರು ಪುತ್ರಿಯರು ಇದ್ದು, ಮೊದಲ ಇಬ್ಬರಿಗೆ ಈಗಾಗಲೇ ವಿವಾಹವಾಗಿದೆ. ಕುಟುಂಬದ ಎಲ್ಲ ಸದಸ್ಯರ ಪ್ರೀತಿ, ಬೆಂಬಲ ಮತ್ತು ಉಜ್ವಲ ಭವಿಷ್ಯವಿದ್ದರೂ ಆಂಚಲ್ ತಮ್ಮ ಜೀವನದ ಉದ್ದೇಶ ಬೇರೆ ಎಂದು ಕಂಡುಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಆಂಚಲ್ ಕುಮಾರಿ ಆಧ್ಯಾತ್ಮಿಕ ಚಿಂತನೆಯತ್ತ ವಾಲಿದ್ದರು. ಜೈನ ಧರ್ಮದ ತತ್ವಗಳು, ಅಹಿಂಸೆ, ತ್ಯಾಗ ಮತ್ತು ಸಂಯಮದ ಜೀವನ ಶೈಲಿ ಅವರನ್ನು ಆಳವಾಗಿ ಪ್ರಭಾವಿಸಿದೆ. ಜೈನ ಸನ್ಯಾಸಿಗಳ ಸರಳ ಜೀವನ, ಅವರ ಮುಖದಲ್ಲಿರುವ ಶಾಂತಿ ಮತ್ತು ನಗು ಆಂಚಲ್ ಅವರ ಮನಸ್ಸಿಗೆ ತಟ್ಟಿದೆ.
ಸನ್ಯಾಸಿಗಳ ಮುಖದಲ್ಲಿರುವ ನಿಜವಾದ ಸಂತೋಷ ನನಗೆ ಆಳವಾದ ಪ್ರೇರಣೆ ನೀಡಿದೆ. ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಸುಖ ಹೆಚ್ಚು ಶಾಶ್ವತ ಎಂದು ಅನಿಸಿತು. ಈ ಭಾವನೆಯೇ ಮಹತ್ವದ ನಿರ್ಧಾರಕ್ಕೆ ಕಾರಣವಾಯಿತು ಎಂದು ಆಂಚಲ್ ಹೇಳಿಕೊಂಡಿದ್ದಾರೆ.
ಗುಜರಾತ್‌ನ ಸೂರತ್ ನಗರದಲ್ಲಿ ಜೈನ ಧರ್ಮದ ಪ್ರಸಿದ್ಧ ಗುರುಗಳಾದ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರಿಂದ ಆಂಚಲ್ ಕುಮಾರಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು, ಈ ದೀಕ್ಷೆಯೊಂದಿಗೆ ಅವರು ಸಂಪೂರ್ಣವಾಗಿ ಭೌತಿಕ ಜೀವನದಿಂದ ದೂರ ಸರಿದು, ತ್ಯಾಗ, ತಪಸ್ಸು ಮತ್ತು ಸೇವೆಯ ಮಾರ್ಗದಲ್ಲಿ ಹೆಜ್ಜೆ ಹಾಕಲಿದ್ದಾರೆ.


