-ರಾಜಶೇಖರ್ ಹೆಚ್ ಎಂ
ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಸದಾ ಕುತೂಹಲದ ಕೇಂದ್ರಬಿoದುವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣವು ಈಗ ಅಧಿಕೃತವಾಗಿ ಕಾವು ಪಡೆದುಕೊಂಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸುಭಾನ್ ಖಾನ್ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಪ್ರಕ್ರಿಯೆಗೆ ಚುರುಕು ಮುಟ್ಟಿಸಿದ್ದಾರೆ.
ಪಾಲಿಕೆ ಆವರಣಲದಲ್ಲಿ ತೆರೆದಿರುವ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸುಭಾನ್ ಖಾನ್ ಅವರು, ಸಾಮಾನ್ಯ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರವು ವೈವಿಧ್ಯಮಯ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಇಲ್ಲಿ ಉಪಚುನಾವಣೆ ಘೋಷಣೆಯಾದಾಗಿನಿಂದಲೂ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಕಾರ್ಯತಂತ್ರಗಳನ್ನು ಹೆಣೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸುಭಾನ್ ಖಾನ್ ಅವರಂತಹ ಪಕ್ಷೇತರ ಅಭ್ಯರ್ಥಿಗಳ ಎಂಟ್ರಿ, ಮತಗಳ ಹಂಚಿಕೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕ್ಷೇತ್ರದ ದೈತ್ಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ತಮ್ಮ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸದೆ, ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ತೊಡಗಿವೆ. ದಾವಣಗೆರೆ ದಕ್ಷಿಣ ಕ್ಷೇತ್ರವು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ ಭದ್ರಕೋಟೆ ಎನ್ನಿಸಿಕೊಂಡಿದೆ. ಆದರೂ ಉಪಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಹಿರಿಯ ನಾಯಕರ ಆಶೀರ್ವಾದ ಪಡೆದ ಅಭ್ಯರ್ಥಿಗಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಸ್ಥಳೀಯ ಕಾರ್ಯಕರ್ತರ ಒಲವು ಯಾರ ಕಡೆಗಿದೆ ಎಂಬ ಬಗ್ಗೆ ಆಂತರಿಕ ಸಮೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಅಭ್ಯರ್ಥಿಯ ಹೆಸರು ಅಂತಿಮವಾಗುವ ಸಾಧ್ಯತೆಯಿದೆ.
ಇತ್ತ ಬಿಜೆಪಿ ಪಾಳಯದಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಕಳೆದ ಬಾರಿ ಸ್ವಲ್ಪದರಲ್ಲೇ ಕೈತಪ್ಪಿದ ಗೆಲುವನ್ನು ಈ ಬಾರಿ ತನ್ನದಾಗಿಸಿಕೊಳ್ಳಲು ಕೇಸರಿ ಪಡೆ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಜಿಲ್ಲಾ ಮಟ್ಟದ ನಾಯಕರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ರಾಜ್ಯ ಘಟಕಕ್ಕೆ ರವಾನಿಸಿದ್ದಾರೆ. ಜಾತಿ ಸಮೀಕರಣ ಮತ್ತು ಕ್ಷೇತ್ರದ ಪ್ರಭಾವಿ ಮತದಾರರನ್ನು ಸೆಳೆಯಬಲ್ಲ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ ನಾಯಕರು ಬ್ಯುಸಿಯಾಗಿದ್ದಾರೆ.
ಸುಭಾನ್ ಖಾನ್ ಅವರು ನಾಮಪತ್ರ ಸಲ್ಲಿಸಿರುವುದು ಪ್ರಮುಖ ಪಕ್ಷಗಳಿಗೆ ಕೊಂಚ ಆತಂಕ ತಂದಿದೆ. ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳು ಅಂತಿಮವಾಗಿ ಪ್ರಮುಖ ಪಕ್ಷಗಳ ಗೆಲುವಿನ ಅಂತರದ ಮೇಲೆ ಪ್ರಭಾವ ಬೀರುವುದು ಸಹಜ. ಹೀಗಾಗಿ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಘೋಷಣೆಯ ನಂತರವಷ್ಟೇ ಕ್ಷೇತ್ರದ ನಿಜವಾದ ಚಿತ್ರಣ ಸ್ಪಷ್ಟವಾಗಲಿದೆ.


