ಬೇರೆ ಜಾತಿ ಯುವನೊಂದಿಗೆ ಮಗಳ ಮದುವೆ ಮಾಡಿದ್ದಕ್ಕಾಗಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜು ಎಂಬವರ ಕುಟುಂಬನ್ನು ಬಹಿಷ್ಕರಿಸಲಾಗಿದೆ.
ಈ ಬಹಿಷ್ಕಾರ ತೆರವಾಗಬೇಕಾದರೆ 5 ಲಕ್ಷ ರೂ. ತಪ್ಪು ಕಾಣಿಕೆ ಕೊಡಬೇಕು ಎಂದು ಹೇಳಲಾಗಿದೆ. ಕೃಷ್ಣಮೂರ್ತಿ ತಮ್ಮ ಮಗಳಿಗೆ ಆಕೆಯ ಆಸೆಯಂತೆ ಪ್ರೀತಿಸಿದ್ದ ಬೇರೆ ಜಾತಿಯ ಯುವಕನ ಜೊತೆ 2023ರಲ್ಲಿ ಮದುವೆ ಮಾಡಿದ್ದರು.
ಮಗಳು ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಗಂಡನನ್ನು ಕಳೆದುಕೊಂಡಿದ್ದಾಳೆ. ಅಳಿಯ ತೀರಿಕೊಂಡ ನಂತರ ಮಗಳನ್ನು ಕೃಷ್ಣಮೂರ್ತಿ ದಂಪತಿ ಬಂಡಿಗೆರೆ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದು ಉಪ್ಪಾರ ಸಮಾಜದ ನಾಯಕರು ಸಿಟ್ಟಿಗೆದ್ದು, ನಿಮ್ಮನ್ನು ಮತ್ತು ನಿಮ್ಮ ಮಗಳನ್ನು ಯಾವುದೇ ಕಾರಣಕ್ಕೂ ಊರಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಊರಿನಿಂದ ಹೊರ ಹಾಕಿದ್ದಾರೆ.
ಈ ಬಗ್ಗೆ ಪೊಲೀಸರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಕುಟುಂಬ ಹೇಳಿದೆ. ತಮ್ಮದೇ ಉಪ್ಪಾರ ಸಮುದಾಯದವರು ನಮ್ಮನ್ನು ಬಹಿಷ್ಕಾರ ಮಾಡಿದ್ದಾರೆ ಎಂದು ಕೃಷ್ಣರಾಜು ಅಳಲು ತೋಡಿಕೊಂಡಿದ್ದಾರೆ. ಪೊಲೀಸ್, ಕೋರ್ಟ್ ಕಚೇರಿ ಎಂದು ಹೋದರೆ ಸರಿ ಇರಲ್ಲ ಎಂದು ಬೆದರಿಕೆ ಕೂಡ ಹಾಕಲಾಗಿದೆ. ಕೃಷ್ಣಮೂರ್ತಿ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದೆ.


