ಬೆಂಗಳೂರಿನ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕಿರುಕುಳ ನೀಡುತ್ತಿದ್ದ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಪತ್ನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಮುರುಗೇಶ್ (50) ಎಂಬವರನ್ನು ಪತ್ನಿ ಲಕ್ಷ್ಮೀ ಕೊಲೆ ಮಾಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಈ ದಂಪತಿ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲನೇ ಮಗಳಿಗೆ ಮದುವೆಯಾಗಿತ್ತು. ಎರಡನೇ ಮಗಳು ಮನೆ ಬಿಟ್ಟು ಹೋಗಿದ್ದಳು. ಈ ಕಾರಣಕ್ಕೆ ರಾತ್ರಿ ಲಕ್ಷ್ಮೀ ಜೊತೆ ಮುರುಗೇಶ್ ಜಗಳ ಮಾಡಿದ್ದಾರೆ. ಇದರಿಂದ ಕೋಪಗೊಂಡು ಲಕ್ಷ್ಮೀ ತನ್ನ ಗಂಡ ಮುರುಗೇಶ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಬೊಮ್ಮನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಎರಡನೇ ಮಗಳು ಮನೆ ಬಿಟ್ಟು ಹೋಗಲು ಪತ್ನಿಯೇ ಕಾರಣ ಎಂದು ಮುರುಗೇಶ್ ಪ್ರತಿ ನಿತ್ಯ ಪತ್ನಿ ಲಕ್ಷ್ಮೀ ಜೊತೆ ಜಗಳವಾಡುತ್ತಿದ್ದ,ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ತಾಳ್ಮೆ ಕಳೆದುಕೊಂಡ ಲಕ್ಷ್ಮೀ ಚಾಕುವಿನಿಂದ ಪತಿಗೆ ಇರಿದಿದ್ದಾಳೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ರಕ್ಷಿಸಿದ ಪೊಲೀಸ್
ಬೆಂಗಳೂರು ಹುಳಿಮಾವು ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಕೋಣನಕುಂಟೆ ಹೊಯ್ಸಳ ಪೊಲೀಸರು ಸಮಯಕ್ಕೆ ಸರಿಯಾಗಿ ತಕ್ಷಣ ಸ್ಪಂದಿಸಿ ಜೀವವುಳಿಸಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಯುವತಿ ವಿಷ ಸೇವನೆ ಮಾಡಿದ ಬಳಿಕ ತಂದೆಗೆ ಕರೆ ಮಾಡಿದ್ದಾಳೆ. ಇದರಿಂದ ಗಾಬರಿಗೊಂಡು ಏನು ಮಾಡಬೇಕು ಎಂದು ತೋಚದೆ ತಂದೆ 112 ಗೆ ಕರೆ ಮಾಡಿದ್ದಾರೆ. ತಕ್ಷಣ ಕೋಣನಕುಂಟೆ ಠಾಣೆ ಹೊಯ್ಸಳ ಪೊಲೀಸರು ಕಾರ್ಯಪ್ರವೃತ್ತರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಣನಕುಂಟೆ ಠಾಣೆ ಎಎಸ್ಐ ಶ್ರೀನಿವಾಸ ಮೂರ್ತಿ, ಕಾನ್ಸಟೇಬಲ್ ಮಂಜುನಾಥ್ ಯುವತಿಯನ್ನು ರಕ್ಷಣೆ ಮಾಡಿದ್ದು, ಯುವತಿ ಸುರಕ್ಷಿತವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಲಾಗಿದೆ. ಆಕೆ ಯಾವ ಕಾರಣಕ್ಕೆ
ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು ಎಂಬುದು ತನಿಖೆಯಿಂದ ಹೊರಬರಬೇಕಿದೆ.


