ಹೈದರಾಬಾದ್ನಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಒಂದು ವರ್ಷದ ಹಿಂದೆ ಮಗಳೇ ತಾಯಿಯನ್ನು ಕೊಂದು ಶವವನ್ನು ಮನೆಯಲ್ಲೇ ಹೂತು ಹಾಕಿರುವ ಪ್ರಕರಣ ಬಹಿರಂಗಗೊಂಡಿದೆ. ತಾಯಿಯ ದ್ವಿಚಕ್ರವಾಹನವನ್ನು ಮಾರುವುದಕ್ಕೆ ಯತ್ನಿಸಿದಾಗ ಹೈದರಾಬಾದ್ನ ಜವಾಹರನಗರದಲ್ಲಿ ನಡೆದ ಭಯಾನಕ ಕೃತ್ಯ ಬಯಲಾಗಿದೆ.
ಮಗಳು ಪ್ರಿಯಕರನೊಂದಿಗೆ ಸೇರಿ ತಾಯಿಯನ್ನು ಕೊಂದು ವಾಸವಿದ್ದ ಮನೆಯಲ್ಲೇ ಹೂತು ಹಾಕಿದ್ದಳು. 2025ರ ಮೇ ತಿಂಗಳಿನಲ್ಲಿ ತಾಯಿ ಅಂಜು ತಮ್ಮ ಪ್ರೀತಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಗಳು ಇಶಿಕಾ ಹಾಗೂ ಆಕೆಯ ಪ್ರಿಯಕರ ಮೌಂಟಿ ರಾಜಪೂತ್ ಕೊಲೆ ಮಾಡಿದ್ದರು. ಶವವನ್ನು ಮನೆಯಲ್ಲೇ ಹೂತು ಹಾಕಿದ್ದಾರೆ.
ಅಂಜು ಬಳಸುತ್ತಿದ್ದ ದ್ವಿಚಕ್ರವಾಹನವನ್ನು ಅಡಗಿಸಿಟ್ಟು, ತಾಯಿ ಸ್ಕೂಟಿ ಸಹಿತ ನಾಪತ್ತೆಯಾಗಿದ್ದಾರೆ ಎಂದು ಇಶಿಕಾ ಪೊಲೀಸರಿಗೆ ದೂರು ನೀಡಿದ್ದಳು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಜವಾಹರನಗರ ಪೊಲೀಸರು ತನಿಖೆ ಕೈಗೆತ್ತಿಕೊಂಡರೂ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ ಇಶಿಕಾ ಇತ್ತೀಚೆಗೆ ತಾಯಿಯ ಸ್ಕೂಟಿಯನ್ನು ಮಾರುವುದಕ್ಕೆ ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇಶಿಕಾಳ ಗೆಳೆಯ ಮೌಂಟಿ ರಾಜಪೂತ್, ಅಂಜು ಅವರಿಗೆ ಸೇರಿದ ದ್ವಿಚಕ್ರ ವಾಹನ ಮಾರಾಟ ಮಾಡಲು ರಾಮಕೋಠಿಯಲ್ಲಿರುವ ಅಂಗಡಿಯೊಂದಕ್ಕೆ ಹೋಗಿದ್ದ. ಆತ ಅನುಮಾನ ಬರುವಂತೆ ಮಾತನಾಡಿದ್ದರಿಂದ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆಯ ನಂತರ ಪೊಲೀಸರು ಇಶಿಕಾ ಹಾಗೂ ಆಕೆಯ ಪ್ರಿಯಕರ ಮೌಂಟಿ ರಾಜಪೂತ್ನನ್ನು ಬಂಧಿಸಿದ್ದಾರೆ. ತಾಯಿ ತಮ್ಮ ಪ್ರೀತಿಗೆ ಅಡ್ಡಿಪಡಿಸಿದ್ದರಿಂದ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


