ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸುತ್ತಿದ್ದಂತೆಯೇ ಮೈಸೂರಿನಲ್ಲಿರುವ ದರ್ಶನ್ ಅವರ ಮನೆ, ಫಾರ್ಮ್ ಹೌಸ್‌ಗೆ ಹೋಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ದರ್ಶನ್ ಮನೆ ಮುಂದೆ ಪೊಲೀಸ್ ನಿಯೋಜನೆಯಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಕೋರ್ಟ್ ಹೇಳಿರುವ ಹಿನ್ನೆಲೆ ಈ ನಡುವೆ ದರ್ಶನ್ ಇಂದು ಸಂಜೆಯೇ ಕೋರ್ಟ್‌ಗೆ ಶರಣಾಗುವುದಾಗಿ ಹೇಳಿದ್ದಾಗಿ ಮಾಧ್ಯಮ ಮೂಲವೊಂದು ತಿಳಿಸಿದೆ.
ಮನೆ ಗೇಟ್ ಬೀಗ ಹಾಕಿಕೊಂಡು ದರ್ಶನ್ ತಾಯಿ ಮನೆ ಒಳಗೆ ಇದ್ದಾರೆ. ಇತರ ಆರೋಪಿಗಳ ಬಂಧನಕ್ಕೂ ಮುಂದಾಗಿರುವ ಪೊಲೀಸರು ಆರೋಪಿ ಪವಿತ್ರಾಗೌಡ ಅವರ ಮನೆ ಮುಂದೆ ನಿಯೋಜನೆಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಂಧಿಸಿ ಕರೆದೊಯ್ಯಬಹುದಾಗಿದೆ. ಬೆಂಗಳೂರು ರಾಜರಾಜೇಶ್ವರಿ ನಗರದ ನಿವಾಸದಿಂದ ದರ್ಶನ್ ಅಕ್ಕನ ಮಗ ದರ್ಶನ್‌ಗೆ ಸಂಬಂಧಿಸಿದ ಬಟ್ಟೆ ಸೇರಿದಂತೆ ಲಗೇಜ್ ಕೊಂಡೊಯ್ಯುತ್ತಿದ್ದಾರೆ ಎನ್ನಲಾಗಿದೆ.
ಕೋರ್ಟ್‌ಗೆ ಶರಣಾದರೆ ದರ್ಶನ್ ಬಲ್ಳಾರಿ ಜೈಲಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಬಳ್ಳಾರಿ ಜೈಲಿನಲ್ಲಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಅವರು ರಾಜ್ಯದಲ್ಲಿ ಇಲ್ಲ, ತಮಿಳುನಾಡಿನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ಆರೋಪ ಕೇಳಿಬಂದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. 63 ದಿನ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. ಅಕ್ಟೋಬರ್ 30 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಸುಪ್ರೀಂ ಕೋರ್ಟ್ ಆದೇಶದನ್ವಯ ಈಗ ಮತ್ತೆ ಜೈಲು ಸೇರುವ ದರ್ಶನ್ ಸಾಮಾನ್ಯ ಕೈದಿಯಾಗಿಯಾಗಿ ಇರಬೇಕಾಗುತ್ತದೆ ಎಂಬುದು ಗಮನಾರ್ಹ.