ಕೊನೆಯ ಉಸಿರು ಇರೋವವರೆಗೂ ದರ್ಶನ್ ನನ್ನ ಮಗನೇ. ಇನ್ ಸ್ಟಾದಲ್ಲಿ ಅನ್ ಫಾಲೋ ಮಾಡಿದರೆ ಸಂಬಂಧ ಹಾಳಾಗುತ್ತಾ ಎಂದು ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಸುಮಲತಾ, ಪುತ್ರ ಅಭಿಷೇಕ್ ಮತ್ತು ಅಭಿಷೇಕ್ ಪತ್ನಿ ಅವಿವಾ ಅವರನ್ನು ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ತಾಯಿ-ಮಗನ ಸಂಬಂಧ ಹಾಳಾಗಿದೆಯೇ ಎಂಬ ಬಗ್ಗೆ ಗುಮಾನಿ ವ್ಯಕ್ತಪಡಿಸಿ ಸುದ್ದಿಗಳನ್ನು ಪ್ರಕಟಿಸಿದ್ದವು.
ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸುಮಲತಾ, ನಾನು ಪೋಸ್ಟ್ ಹಾಕಿರುವುದು ದರ್ಶನ್ ವಿರುದ್ಧ ಅಲ್ಲ. ನಾನು ಹಾಕಿದ ಉದ್ದೇಶವೇ ಬೇರೆ, ಜನರು ಹಾಗೂ ಮಾಧ್ಯಮಗಳು ಅರ್ಥ ಮಾಡಿಕೊಳ್ಳುತ್ತಿರುವ ರೀತಿಯೇ ಬೇರೆ ಎಂದು ಸ್ಪಷ್ಟಪಡಿಸಿದರು.
ದರ್ಶನ್ ನನ್ನ ಇನ್ ಸ್ಟಾ ಮಾತ್ರ ಅನ್ ಫಾಲೋ ಮಾಡಿಲ್ಲ. ಬದಲಾಗಿ ಎಲ್ಲರನ್ನೂ ಅನ್ ಫಾಲೋ ಮಾಡಿದ್ದಾರೆ. ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನಾನು ಪೋಸ್ಟ್ ಮಾಡಿರುವುದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದರು.
ದರ್ಶನ್ ಮತ್ತು ನಮ್ಮ ಕುಟುಂಬದ ಸಂಬಂಧ ೨೫ ವರ್ಷಗಳ ಹಳೆಯದು. ನಿನ್ನೆ ಮೊನ್ನೆಯದೇನಲ್ಲ. ಮೆಜೆಸ್ಟಿಕ್ ಚಿತ್ರದ ಮುಹೂರ್ತದಿಂದ ನಾವು ಜೊತೆಗೆ ಇದ್ದೇವೆ. ಯಾರು ಯಾವಾಗ ಎಷ್ಟು ಸಹಾಯ ಮಾಡಿದ್ದೇವೆ ಅಥವಾ ಜೊತೆಗಿದ್ದೇವೆ ಅನ್ನೋದು ನಮಗೆ ಗೊತ್ತಿದೆ. ಇದನ್ನು ಬಹಿರಂಗವಾಗಿ ಚರ್ಚೆ ಮಾಡಲು ಬಯಸುವುದಿಲ್ಲ ಎಂದು ಸುಮಲತಾ ವಿವರಿಸಿದರು.
ಮಾಧ್ಯಮಗಳು ಸಿಲ್ಲಿ ವಿಷಯವನ್ನು ಇಷ್ಟು ದೊಡ್ಡದಾಗಿ ಯಾಕೆ ಮಾಡುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ. ಇದನ್ನು ನೋಡಿ ನಗಬೇಕೋ ಅಥವಾ ಬೇಸರಪಟ್ಟುಕೊಳ್ಳಬೇಕೋ ಗೊತ್ತಾಗುತ್ತಿಲ್ಲ. ೨-೨ ನಾಲ್ಕು ಮಾಡಿ ಅಂದರೆ ೪೦ ಮಾಡುತ್ತಿದ್ದೀರಿ. ಇದರಿಂದ ಯಾರಿಗೆ ಲಾಭ ಎಂದು ಸುಮಲತಾ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.