ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ಕೆಟ್ಟು ನಿಂತಿದ್ದ ಕಾರನ್ನು ಪರಿಶೀಲಿಸುತ್ತಿದ್ದಾಗ ವೇಗವಾಗಿ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಡ್ಯಾನ್ಸರ್ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ಯಾಂಟರ್ ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸಿ ಪರಾರಿಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಪಘಾತದ ಒಂದು ದಿನ ಮುಂಚೆ ಅವರು ಮಾರುತಿ ಸುಜುಕಿ ಇಕೋ ಮಾಡೆಲ್‌ನ ಹೊಸ ಕಾರು ಖರೀದಿಸಿ ತಂದಿದ್ದರು. ಈ ಖುಷಿಯಲ್ಲೇ ಕಾರನ್ನು ಓಡಿಸುತ್ತಾ ಮನೆಗೆ ಹೋಗುತ್ತಿದ್ದ ವೇಳೆ ಪೆಮ್ಮನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಕಾರು ಕೆಟ್ಟು ನಿಂತಿದೆ.
ಸುಧೀಂದ್ರ ಕಾರಿನಿಂದ ಇಳಿದು ಪರಿಶೀಲಿಸುತ್ತಿದ್ದರು. ಆಗ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿಯ ಮುಂಭಾಗಕ್ಕೂ ಹಾನಿಯಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಫೂಟೇಜ್, ಸಾಕ್ಷಿಗಳ ಹೇಳಿಕೆ ಮತ್ತು ಲಾರಿಯ ನೋಂದಣಿ ಸಂಖ್ಯೆಯನ್ನು ಬಳಸಿ ಚಾಲಕನ ಹುಡುಕಾಟ ನಡೆಸಲಾಗುತ್ತಿದೆ.
ಸುಧೀಂದ್ರ ಕನ್ನಡ ಟೆಲಿವಿಷನ್‌ನಲ್ಲಿ ಜನಪ್ರಿಯ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದರು. ಜೀ ಕನ್ನಡ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ‘ಡ್ಯಾನ್ಸಿಂಗ್ ಸ್ಟಾರ್’, ‘ಕಾಮೆಡಿ ಕಿಲಾಡಿಗಳು’ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದರು.


