ಆಂಧ್ರಪ್ರದೇಶದ ಕರಾವಳಿಯತ್ತ ಮೊಂಥಾ ಚಂಡಮಾರುತವು ವೇಗವಾಗಿ ಸಾಗುತ್ತಿದ್ದು, ಸಂಜೆ ಅಥವಾ ರಾತ್ರಿ ಕಾಕಿನಾಡ ಬಳಿಯ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಭೂಮಿಯನ್ನು ಸ್ಪರ್ಶಿಸುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಜಾರಿ ಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರಾವಳಿ ಪ್ರದೇಶಗಳ ನಿವಾಸಿಗಳ ತ್ವರಿತ ಸ್ಥಳಾಂತರಕ್ಕೆ ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಈ ಚಂರಮಾರುತಕ್ಕೆ ಸಂಬಂಧಿಸಿದಂತೆ ನೀರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ನಾಯ್ಡು ಅವರು ಜಿಲ್ಲಾಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಯಾವುದೇ ಜೀವಹಾನಿ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಅಪಾಯ ಸಾಧ್ಯತೆ ದಟ್ಟವಾಗಿರುವ ಪ್ರದೇಶಗಳಿಂದ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಪ್ರಾರಂಭವಾಗಿದೆ. ಮುಖ್ಯಮಂತ್ರಿ ನಾಯ್ಡು ಮತ್ತು ನಾರಾ ಲೋಕೇಶ್ ವಾರ್ ರೂಮ್‌ನಿಂದ ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿನ ನಿವಾಸಿಗಳ ಸ್ಥಳಾಂತರದ ಜೊತೆಗೆ, 400 ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿದೆ.
ಮೊಂಥಾ ಚಂಡಮಾರುತವು ಗಂಟೆಗೆ 90 ರಿಂದ 110 ಕಿಲೋಮೀಟರ್ ವೇಗದಲ್ಲಿ ಪ್ರಚಂಡ ಗಾಳಿಯೊಂದಿಗೆ ಬೀಸುವುದರೊಂದಿಗೆ ಭಾರಿ ಮಳೆ ತರುತ್ತದೆ. ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಹಾನಿಯ ಆತಂಕವಿದೆ. ಸಿಎಂ ನಾಯ್ಡು ಅಧಿಕಾರಿಗಳಿಗೆ ಗಂಟೆಗೊಮ್ಮೆ ಚಂಡಮಾರುತದ ಬುಲೆಟಿನ್‌ಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ನಿರಂತರವಾಗಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಪರಿಹಾರ ಶಿಬಿರಗಳಲ್ಲಿ ಪ್ರತಿ ವ್ಯಕ್ತಿಗೆ 25 ಕೆಜಿ ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿ ಸನ್ನದ್ಧಗೊಳಿ ಸಲಾಗಿದೆ.


