ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬೆಂಗಳೂರಿನ ಟೆಕ್ಕಿ ಯುವತಿಗೆ ನನ್ನಲ್ಲಿ ಕೋಟಿಗಟ್ಟಲೆ ಆಸ್ತಿ ಇದೆ, ನಿನ್ನ ಮದುವೆಯಾಗುವುದಾಗಿ ನಂಬಿಸಿ 1.75 ಕೋಟಿ ರೂಪಾಯಿ ವಂಚಿಸಿದ್ದಾನೆ. ಈ ವಂಚನೆಯಲ್ಲಿ ಆತನ ಇಡೀ ಕುಟುಂಬವೇ ಕೈ ಜೋಡಿಸಿತ್ತು ಎಂಬ ಸತ್ಯ ಬಹಿರಂಗಗೊಂಡಿದೆ.
ಯುವತಿಗೆ 2024ರ ಮಾರ್ಚ್ನಲ್ಲಿ ಮ್ಯಾಟ್ರಿಮೋನಿ ಸೈಟ್ ಮೂಲಕ ವಿಜಯ್ ರಾಜ್ ಗೌಡ ಎಂಬ ವ್ಯಕ್ತಿಯ ಪರಿಚಯವಾಗಿ ತಾನು ದೊಡ್ಡ ಉದ್ಯಮಿ, 715 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ನಂಬಿಸಿದ್ದ ತನ್ನ ತಂದೆ ಬೋರೆಗೌಡ ‘ನಿವೃತ್ತ ತಹಶೀಲ್ದಾರ್’ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಟ್ಟಿದ್ದ.
ವಿಜಯ್ ರಾಜ್ ಗೌಡ ಎಂಬಾತನಿಗೆ ಮದುವೆಯಾಗಿ ಮಗುವೂ ಇತ್ತು. ಆದರೆ ಯುವತಿಯನ್ನು ನಂಬಿಸಲು ಪತ್ನಿ ಸೌಮ್ಯಳನ್ನು ಅಕ್ಕ ಎಂದು ಪರಿಚಯಿಸಿದ್ದ. ಕೆಂಗೇರಿ ಬಳಿ ಯುವತಿಯನ್ನು ಕರೆಸಿಕೊಂಡಿದ್ದ ಕುಟುಂಬ, ಮದುವೆ ಮಾತುಕತೆ ನಡೆಸುವ ನಾಟಕವಾಡಿದ್ದರು. ವಿಜಯ್ ತಂದೆ ಬೋರೆಗೌಡ, ನಿಮ್ಮ ಹಣಕ್ಕೆ ನಾನೇ ಗ್ಯಾರೆಂಟಿ ಎಂದು ಹೇಳಿದ್ದರು.
ಆರೋಪಿ ಮೊದಲಿಗೆ ಆಸ್ತಿ ವಿಚಾರವಾಗಿ ಇಡಿ ಕೇಸ್ ದಾಖಲಾಗಿದೆ, ಬ್ಯಾಂಕ್ ಅಕೌಂಟ್ ಫ್ರೀಜ್ ಆಗಿದೆ ಎಂದು ನಂಬಿಸಿ ನಕಲಿ ಕೋರ್ಟ್ ದಾಖಲೆಗಳನ್ನು ತೋರಿಸಿದ್ದ. ತುರ್ತು ಅಗತ್ಯವಿದೆ ಎಂದು ಹೇಳಿ ಮೊದಲು 15 ಸಾವಿರ ರೂ. ಪಡೆದಿದ್ದ. ಬಳಿಕ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಎಂದು ಯುವತಿಯ ಹೆಸರಿನಲ್ಲಿ ಬ್ಯಾಂಕುಗಳಿಂದ ಲೋನ್ ಮಾಡಿಸಿದ್ದ. ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೂ ಬ್ಯುಸಿನೆಸ್ ಲಾಭದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಸಾಲ ಕೊಡಿಸಿದ್ದ. ಒಟ್ಟು 1.75 ಕೋಟಿ ರೂಪಾಯಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ.
ಬಹಳ ದಿನ ಕಳೆದರೂ ಹಣ ವಾಪಸ್ ನೀಡದಿದ್ದಾಗ ಯುವತಿ ಒತ್ತಾಯ ಮಾಡಲಾರಂಭಿಸಿದ್ದಳು. ಆಗ ವಿಜಯ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ ಎಂದು ಹೇಳಿಕೊಂಡಿದ್ದ. ಒತ್ತಡ ಹೆಚ್ಚಾದಾಗ 22 ಲಕ್ಷ ರೂ. ವಾಪಸ್ ನೀಡಿ, ಉಳಿದ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾರಂಭಿಸಿದ್ದ. ಅನುಮಾನಗೊಂಡ ಯುವತಿ ವಿಜಯ್ ಹಿನ್ನೆಲೆ ಜಾಲಾಡಿದಾಗ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಆತ ಪರಿಚಯಿಸಿದ ಅಕ್ಕ ಆತನ ಹೆಂಡತಿ ಎಂದು ಗೊತ್ತಾಗಿದೆ.
ಯುವತಿ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ವಿಜಯ್ ರಾಜ್ ಗೌಡ, ಬೋರೆಗೌಡ ಮತ್ತು ಸೌಮ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


