ದಾವಣಗೆರೆಯ ಶಾಲಾ ಶಿಕ್ಷಕಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ 22.40 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಹಾಸನದ ಬೇಲೂರು ತಾಲೂಕಿನ ಕೋರಟಿಕೆರೆ ಗ್ರಾಮದ ಅರುಣ್ ಕುಮಾರ್(35) ಬಂಧಿತ. ಬಂಧಿತನ ಬ್ಯಾಂಕ್ ಖಾತೆಯನ್ನು ಫ್ರೀಝ್ ಮಾಡಲಾಗಿದೆ. ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಶಿಕ್ಷಕಿಗೆ ಕರೆ ಮಾಡಿದ್ದ ವಂಚಕರು ತಮ್ಮ ಹೆಸರಿನಲ್ಲಿ ದುಬೈಗೆ ಕಳಿಸುತ್ತಿರುವ ಕೊರಿಯರ್ನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ. ಹವಾಲಾ ಹಣದ ವ್ಯವಹಾರ ನಡೆಸುವ ವ್ಯಕ್ತಿಯ ಬಳಿ ನಿಮ್ಮ ಖಾತೆಯ ಡಿಟೇಲ್ಸ್ ಸಿಕ್ಕಿದೆ ಎಂದು ಬೆದರಿಸಿ 22 ಲಕ್ಷ 40 ಸಾವಿರ ರೂ. ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು. ದಾವಣಗೆರೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯ ಸೈಬರ್ ಠಾಣೆ ಪೊಲೀಸರು ಸೈಬರ್ ಕಳ್ಳರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ಸೈಬರ್ ವಂಚಕರು ಪಡೆದ ಮೊಬೈಲ್ ಸಂಖ್ಯೆಯನ್ನು ಅಥವಾ ಆಪ್ ಮೂಲಕ ಕರೆ ಮಾಡಲು ಬಳಸಿದ ಮೊಬೈಲ್ ಮತ್ತೆ ಬಳಸುವುದಿಲ್ಲ. ಎರಡ್ಮೂರು ತಿಂಗಳು ಕಳೆದ ನಂತರ ಅದೇ ಫೋನ್ ಆನ್ ಮಾಡಿಕೊಂಡು ಮತ್ತೆ ವಂಚನೆಗೆ ಮುಂದಾಗುತ್ತಾರೆ. ಹೀಗೆ ವಂಚನೆಗೆ ಮುಂದಾದ ಹಾಸನದ ಸೈಬರ್ ಕಳ್ಳನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ನಕಲಿ ಕರೆ, ಮೆಸೇಜ್, ಒಟಿಪಿಗೆ ಬೇಡಿಕೆ, ಹಣಕ್ಕೆ ಬೇಡಿಕೆ ಇಟ್ಟರೆ ತಕ್ಷಣವೇ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿ. ಅನಗತ್ಯವಾಗಿ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಬ್ಯಾಂಕ್ ಹೆಸರಿನಲ್ಲಿ ಅಥವಾ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂಬ ನೆಪದಲ್ಲಿ ಮಾಹಿತಿ ಪಡೆದು ವಂಚಿಸುವ ಸಾಧ್ಯತೆಗಳು ಹೆಚ್ಚು. ಅನಗತ್ಯ ಕರೆ, ಅನಗತ್ಯ ಲಿಂಕ್ ಕ್ಲಿಕ್ ಮಾಡಿ ಮೋಸ ಹೋಗಬೇಡಿ. ಕರೆಗಳು ಬಂದಾಗ, ನಿಮ್ಮ ನಿಖರ ಮಾಹಿತಿ ನೀಡಿ ಬೆದರಿಸಿದಾಗ ಮೋಸ ಹೋಗಬೇಡಿ. ವಿಚಲಿತರಾಗದೆ ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.