ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಸೈಬರ್ ವಂಚಕರ ಡಿಜಿಟಲ್ ಅರೆಸ್ಟ್ ಜಾಲದ ಭೀತಿಗೆ ಒಳಗಾಗಿ ಇದ್ದ ಪ್ಲಾಟ್, ಸೈಟ್ ಮಾರಿ ಎರಡು ಕೋಟಿ ರೂ. ಕಳೆದುಕೊಂಡಿದ್ದಾರೆ.
ವಿಜ್ಞಾನ ನಗರದ ನ್ಯೂ ತಿಪ್ಪಸಂದ್ರದಲ್ಲಿ ಸಾಫ್ಟ್ವೇರ್ ಉದ್ಯೋಗಿ 10 ವರ್ಷದ ಮಗನೊಂದಿಗೆ ವಾಸವಾಗಿದ್ದು, ಕೆಲವು ತಿಂಗಳ ಹಿಂದೆ ಬ್ಲೂ ಡಾರ್ಟ್ ಕೊರಿಯರ್ ಹೆಸರಿನಲ್ಲಿ ಕರೆ ಬಂದಿತ್ತು. ಕರೆ ಮಾಡಿದವರು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಬ್ಯಾಗೇಜ್ ಪತ್ತೆಯಾಗಿದೆ ಎಂದು ಬೆದರಿಕೆ ಹಾಕಿದ್ದರು.
ಬಳಿಕ ವೀಡಿಯೊ ಕಾಲ್ ಮೂಲಕ ‘ನಾವು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ’ ಎಂದು ಹೆದರಿಸಿ, ವೆರಿಫಿಕೇಶನ್ ನಡೆಯುವವರೆಗೂ ಎಲ್ಲೂ ಹೋಗಬಾರದು. ನಾವು ಹೇಳುವ ಆ್ಯಪ್ ಇನ್ಸ್ಟಾಲ್ ಮಾಡಬೇಕು ಹಾಗೂ ಹೇಳಿದಷ್ಟು ಹಣ ನಾವು ಹೇಳುವ ಖಾತೆಗೆ ಹಾಕಬೇಕು ಎಂದು ಹೇಳಿದ್ದರು.
ಮುಂಬೈ ಪೊಲೀಸರು ಎಂದು ಹೇಳಿಕೊಂಡ ವಂಚಕರು, ವಿಚಾರಣೆಗೆ ಸರಿಯಾಗಿ ಸಹಕರಿಸಿ ಹೇಳಿದಂತೆ ಮಾಡದಿದ್ದರೆ ನಿಮ್ಮ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ಬೆದರಿಸಿದ್ದರು. ಈ ಮಾತುಗಳಿಗೆ ಹೆದರಿದ ಆಕೆ ವಂಚಕರ ಸೂಚನೆಗಳಂತೆ ನಡೆದುಕೊಂಡಿದ್ದಾರೆ. ಹಣ ವರ್ಗಾವಣೆಗಾಗಿ ಮಾಲೂರಿನಲ್ಲಿ ಇದ್ದ ಎರಡು ಸೈಟ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ವಿಜ್ಞಾನ ನಗರದಲ್ಲಿದ್ದ ಫ್ಲಾಟ್ ಕೂಡ ಮಾರಾಟ ಮಾಡಿದ್ದಾರೆ. ಐಸಿಐಸಿಐ ಬ್ಯಾಂಕ್ನಲ್ಲಿ ಲೋನ್ ಪಡೆದು ಹಂತ ಹಂತವಾಗಿ ವಂಚಕರ ಖಾತೆಗೆ ಹಣ ಹಾಕಿದ್ದಾರೆ.
ಹೀಗೆ ಎರಡು ಕೋಟಿ ರೂಪಾಯಿ ಕಳೆದುಕೊಂಡ ಬಳಿಕ ಮೋಸ ಹೋಗಿರುವ ಅನುಮಾನ ಬಂದಿದೆ. ತಕ್ಷಣವೇ ವೈಟ್ಫೀಲ್ಡ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.


