ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ನಲ್ಲಿ 200ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಅಕ್ರಮ ಮನೆಗಳನ್ನು ಧ್ವಂಸ ಮಾಡಿದ ಪ್ರಕರಣ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.
ಬೆಂಗಳೂರಿನ ಕೋಗಿಲು ಬಳಿ ಅಕ್ರಮ ವಲಸಿಗರ ಮನೆಗಳನ್ನು ನೆಲಸಮ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಪಕ್ಕದ ಕೇರಳ ರಾಜ್ಯ ಆಕ್ಷೇಪ ವ್ಯಕ್ತಪಡಿಸಿದ ನಂತರ ಇದೀಗ ಪಾಕಿಸ್ತಾನ ಕೂಡ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಕ್ಯಾತೆ ತೆಗೆದಿದೆ.
ಕ್ರಿಸ್ ಮಸ್ ದಿನ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆದಿದೆ. ಮುಸ್ಲಿಮರ ಮನೆಗಳು ಧ್ವಂಸವಾಗಿ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ತಾಹೀರ್ ಅಂಧ್ರಾಬಿ ಪೋಸ್ಟ್ ಮಾಡಿದ್ದಾರೆ.
‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ಕಿರುಕುಳವು ತೀವ್ರ ಕಳವಳದ ವಿಷಯವಾಗಿದೆ. ಕ್ರಿಸ್‌ಮಸ್ ಆಚರಣೆ ದಿನವೇ ದಾಳಿಗಳು ಆಗಿವೆ. ಸರ್ಕಾರಿ ಪ್ರಾಯೋಜಕತ್ವದಿಂದ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದೆ.
ಭಾರತ ತಿರುಗೇಟು
ಪಾಕಿಸ್ತಾನದ ಹೇಳಿಕೆ ಕಪೋಲಕಲ್ಪಿತ. ಅಲ್ಪಸಂಖ್ಯಾತರು ಅತಂತ್ರದಲ್ಲಿ ಹಾಗೂ ಭಯದಲ್ಲಿ ಇರುವ ವಾತಾವರಣ ಇರುವುದು ನಿಮ್ಮ ದೇಶದಲ್ಲಿ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ಜೈಶ್ವಾಲ್ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಕ್ಯಾತೆಗೆ ವಸತಿ ಸಚಿವ ಜಮೀರ್ ಅಹ್ಮದ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಮೊದಲು ನಿಮ್ಮ ದೇಶವನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಜನರಿಗೆ ಡೆಡ್ ಲೈನ್
ಇತ್ತ ಕೋಗಿಲು ಲೇಔಟ್ ನಲ್ಲಿ ನೆಲೆಸಿದ್ದ ಜನರಿಗೆ ಇಂದು ಬೆಳಗ್ಗೆ 10 ಗಂಟೆಗೆ ಜಾಗ ಬಿಟ್ಟು ಕೊಡಲು ಡೆಡ್ ಲೈನ್ ನೀಡಲಾಗಿದೆ. ಪಾಲಿಕೆ ಅಧಿಕಾರಿಗಳಿಂದ ಫಕೀರ್ ಕಾಲೋನಿ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಹತ್ತು ಗಂಟೆ ಒಳಗಾಗಿ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರೆ.
ಮನೆಗಳು ನೆಲಸಮವಾದ ಜಾಗದಲ್ಲೇ ವಾಸ ಮಾಡ್ತಿರುವ ಜನರು, ರಾತ್ರಿಯೆಲ್ಲಾ ಮನೆಗಳ ಮುಂದೆ ನಿದ್ದೆ ಬಿಟ್ಟು ಕೂತಿದ್ದಾರೆ. ಮತ್ತೆ ಬುಲ್ಡೋಜರ್ ಬರುವ ಆತಂಕದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಕಾವಲಾಗಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರಸವೆ ಕೊಟ್ಟರೂ ಕಾಲೋನಿ ಬಿಟ್ಟು ಜನರು ಕದಲುತ್ತಿಲ್ಲ. ಇದೇ ಜಾಗ ಕೊಡಿ ಅಂತ ವಸೀಂ ಲೇಔಟ್, ಫಕೀರ್ ಕಾಲೋನಿ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.


