ದೇವರು-ಧರ್ಮ ಆವರಣದ ಪರಿಧಿಯೊಳಗೆ ಬಂಧಿಯಾಗಿರುವ ಸಮುದಾಯದ ಮನಸ್ಥಿತಿ ಪೋಷಿಸುವ ಹಾಗೂ ನಿಯಂತ್ರಿಸುವ ಬಹುಮುಖ್ಯ ಉಪಕರಣವೆಂದರೆ ಪುರಾಣ. ವೈಜ್ಞಾನಿಕ ಆಧಾರವಿಲ್ಲದೆಯೇ ಪ್ರಭಾವ ಬೀರುವುದರಲ್ಲಿ ನಿಸ್ಸೀಮ ಕಲ್ಪಕತೆ ಸೃಷ್ಟಿಸಿ, ಆ ಮೂಲಕ ತನ್ನ ವರ್ಚಸ್ಸನ್ನು ಉಳ್ಳವರಿಂದ ದತ್ತವಾಗಿ ಪಡೆದುಕೊಂಡಿದೆ. ಪುರಾಣ ಪ್ರಪಂಚವೊಂದು ವಾಸ್ತವ ಸನ್ನಿವೇಶದಲ್ಲಿ ನವೀಕರಣಕ್ಕೊಳಪಡುವ ಬಗೆ ಹೇಗೆ? ಮತ್ತದು ಜನಜೀವನದ ಮೇಲುಂಟು ಮಾಡುವ ಪರಿಣಾಮದ ಪ್ರಮಾಣ ಎಂಥದ್ದು ಎಂಬುದು ಯೋಚಿಸುವಂಥದ್ದಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಬೃಹತ್ತಾದ ಧಾರ್ಮಿಕ ಮೇಳದ ಕುರಿತು ವ್ಯಕ್ತಪಡಿಸುವ ಅಭಿಪ್ರಾಯಗಳು ಕಟುವಾದ ವಾತಾವರಣ ತೆರೆದಿಡಬಹುದು. ಜನರ ಭಾವನೆಗಳು ಮತ್ತು ನಂಬಿಕೆಗಳನ್ನು ಹೀಯಾಳಿಕೆಯ ತೆಕ್ಕೆಗೆ ತರದೆ ಗೌರವಿಸಬೇಕು ಎಂಬ ಸಹಜ ನುಡಿಗಳನ್ನಾಡಿ ಅದನ್ನು ಹಾಸು ಹೊಕ್ಕಾಗಿಸಿದ್ದಾರೆ. ಹೀಗಾದಾಗ ಮುಕ್ತವಾಗಿ ಮಾತನಾಡುವವರಲ್ಲೂ ದನಿ ಹಿಂಜರಿಯುತ್ತದೆ ಅಥವಾ ಮಂದವಾಗುತ್ತದೆ. ಈ ಎಲ್ಲದರ ಹಿಂದೆ ನಂಬಿಕೆ-ಹುಸಿನಂಬಿಕೆ-ಮೂಢನಂಬಿಕೆ ಬೆರೆತ ಮಿಶ್ರಣ ಭಕ್ತಿ ಮೈದಾಳಿದೆ. ಪಾಪ ಪುಣ್ಯ ಪಾವನವೆಂಬ ಆರಾಧನಾ ಮನಸ್ಥಿತಿಗೆ ಒದಗಿಸಿರುವ ಚೌಕಟ್ಟು ಪುರಾಣ ಕಥೆಯೊಂದರ ಬುಡದಲ್ಲಿದೆ ಮತ್ತದು ವೈಚಾರಿಕತೆಯ ಹರಹನ್ನು ಸಂಪೂರ್ಣವಾಗಿ ಮಟ್ಟಸಗೊಳಿಸಿದೆ. ಧರ್ಮ ವೈಚಾರಿಕತೆ ಉಪಕರಣದಿಂದ ತನ್ನನ್ನು ಶುಚಿರ್ಭೂತವಾಗಿ ಸಂಗೋಪಿಸಿಕೊಳ್ಳಬೇಕು. ತನು ಕರಗದವರಲ್ಲಿ ಮಜ್ಜನವನೊಯಯ್ಯ ನೀನು ಎಂಬ ಅಕ್ಕನ ಈ ಮಂಥನದಂತ ಸಾಲು ನೀರಿನ ರಾಶಿಯಲ್ಲಿ ಮುಳುಗೇಳುತ್ತಿರುವವರಿಗೆ ಕೇಳಿದಂತಿದೆ. ಭಕ್ತಿ ಹಾಗೂ ಭಕ್ತಿಯ ಪರಿಕರಗಳು ಮತ್ತು ಭಕ್ತಿಗೆ ಬೇಕಾದ ಭಾವಗಳು ಸ್ವಚ್ಛವಾಗಿಯೂ ಪಾರದರ್ಶಕವಾಗಿಯೂ ಇರಬೇಕು.
ತಿಳಿಗೊಳದ ಪ್ರತಿಮೆಯಲ್ಲಿ ಹೇಳುವುದಾದರೆ, ಹಸುಗೂಸಿನ ಕಂಗಳಲ್ಲಿ ಕಾಣುವ ಬಿಂಬದ ಸಂಸರ್ಗದಂತೆ. ನೀರನ್ನು ಛೇದಿಸಿ ಧಾರ್ಮಿಕ ಪರಿಭಾಷೆಗೆ ಒಗ್ಗಿಸಿ ಕೊಳ್ಳುವ ಈ ಕ್ರಮ ನಿಸರ್ಗದ ವಿಘಟನೆಗೆ ಬಳಸಿಕೊಳ್ಳುತ್ತದೆ. ಭೂತಲದ ಮೇಲೆ ಹರಡಿರುವ ರಾಶಿರಾಶಿ ನೀರೆಲ್ಲವೂ ಪವಿತ್ರವೇ ಆಗಿರುವಾಗ ಪುರಾಣದ ಕತೆ ಬೆನ್ನೆಲುಬಾಗಿಸಿಕೊಂಡು ಅಮೃತ ಸ್ನಾನಕ್ಕೆ ಎಳೆದು ತಂದಿರುವ ರೀತಿ ವ್ಯವಸ್ಥೆಯ ಹಿಡಿತವನ್ನು ನಿತ್ಯವೂ ದೃಶ್ಯ ಸಂಯೋಜನೆಯ ಅನಾವರಣದಲ್ಲಿ ಕಂಗೊ ಳಿಸುವಂತೆ ಮಾಡುತ್ತಿದೆ. ಮಾನವ ಸಂಬಂಧಗಳನ್ನು ತರ ತಮ ವ್ಯವಸ್ಥೆಯಲ್ಲಿಟ್ಟಂತೆ, ಪ್ರಾಕೃತಿಕ ಉದಾರತೆಯನ್ನು ಅದೇ ಸತ್ತೆಯಲ್ಲಿಡಲು ಆಶಿಸಿದೆ ಯಲ್ಲದೆ, ಕೋಟಿ ಕೋಟಿ ಜನ ಹೀಗೆ ಗಂಗೆಯೊಳಗೆ ಇಳಿಯುವುದರಿಂದ ನೀರು ಅಮೃತಮಯವಾಗುವುದಿಲ್ಲ. ವಿಷಮಯವಾಗಿತ್ತದೆ. ಕಲುಷಿತ ವಾತಾವರಣ ಸುತ್ತಲೂ ಹೆಪ್ಪುಗಟ್ಟಿ ಮುಂಬರುವ ದಿನಮಾನಗಳು ಮತ್ತಷ್ಟು ಕೆಟ್ಟದಾಗುತ್ತವೆ. ಲೋಹಿಯಾ ‘ಇಂಡಿಯಾದ ನದಿಗಳು’ ಎಂಬ ಲೇಖನದಲ್ಲಿ ಇದರ ಅವಾಂತರಗಳ ಕುರಿತು ಗಮನ ಸೆಳೆದಿದ್ದಾರೆ.
ದಿನನಿತ್ಯವೂ ನಮ್ಮ ಮನೆಗಳಲ್ಲಿ ನೀರನ್ನು ಬಳಸುತ್ತೇವೆ. ಹೀಗೆ ನಿತ್ಯ ಬಳಕೆಗೆ ಒದಗಿ ಬರುವ ನಮ್ಮೆಲ್ಲರ ನೀರು ಏನೂ ಅಲ್ಲವೇ? ಊರಿನ ಸುತ್ತಮುತ್ತಲಿರುವ ಕೆರೆ ಹಳ್ಳ ಕೊಳ್ಳ ಹೊಳೆ ನದಿ ಮುಂತಾದ ಮೂಲಗಳಿಂದೊದಗಿ ಬರುವ ಜಲಕ್ಕೆ ಮೌಲ್ಯವಿಲ್ಲವ ಎಂದು ಕೇಳಿಕೊಳ್ಳಬೇಕಿದೆ. ಈ ಸಂಕಥನಗಳ ಸರಣಿಯನ್ನು ಒಡೆದು ಕಟ್ಟುವ ಬಗೆಯನ್ನು ಯೋಚಿಸಬೇಕಿದೆ. ವಿಶ್ವ ಸುಂದರಿ ಪಟ್ಟ ಕಟ್ಟಿ ಉಳಿದ ಸ್ತ್ರೀಯರನ್ನು ಅಸುಂದರಿಯರು ಎಂದು ಅವಹೇಳನ ಮಾಡಿದ ಹಾಗೆ ಕುಂಭಮೇಳದಲ್ಲಿ ಮುಳುಗುವ ನೀರಿಗೆ ಪುಣ್ಯದ ಪಟ್ಟ ಕಟ್ಟಿ ನಿತ್ಯ ಬಳಸುವ ನಮ್ಮಗಳ ನೀರನ್ನು ಅವಮಾರ್ಯದೆಗೆ ಗುರಿಪಡಿಸಲಾಗಿದೆ. ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾ ಮಾಯಿ’ ಕಾದಂಬರಿಯ ಪ್ರಸಂಗವೊಂದು ಸಾಂಪ್ರಾದಾಯಿಕ ನೆಲೆ ಅಲುಗಾಡಿಸುವಂತೆ ನನಗೆ ಕಾಣಿಸುತ್ತದೆ. ಗಂಗವ್ವ ತನ್ನ ಕೊನೆಗಾಲದಲ್ಲಿ ಬಾಯಿಗೆ ಬಿಡಿಸಿಕೊಳ್ಳಲು ಗಂಗಾ ಜಲವನ್ನು ರೈಲಿನಲ್ಲಿ ಒಯ್ಯುತ್ತಿದ್ದಾಗ ದಿಢೀರನೆ ಅವಳಲ್ಲಿ ಮೂಡಿದ ಸಾವಿನ ಹಠಾತ್ ಭೀತಿ ಹಾಗೂ ಮಗ ಕಿಟ್ಟಿಯ ವಿವಾಹೋತ್ತರ ಬಾಳನ್ನು ಕಾಣುವ ಹಂಬಲ ಗರಿಗೆದರಿ ತತ್‌ಕ್ಷಣವೇ ಗಂಗಾ ಜಲವನ್ನು ಚೆಲ್ಲಿ ಪಾತ್ರೆಯನ್ನು ಹೊರಗೆ ಬಿಸಾಡುತ್ತಾಳೆ. ಗುಣವಾಚಕವಾಗಿ ಬಳಕೆಯಾಗಿರುವ ಪವಿತ್ರತೆಯ ಸೋಗು ಇಲ್ಲಿ ಮಕಾಡೆ ಮಲಗುತ್ತದೆ. ಗಂಗವ್ವನ ಈ ಬಿಡಿ ಚಿತ್ರಕ್ಕೆ ಸಮೂಹ ಪ್ರಜ್ಞೆಯ ಹರಹಿದೆ. ಕೋಟ್ಯಾನುಕೋಟಿ ಜನರು ಮಿಂದು ಏಳಬಹುದು. ಆದರೆ ಕೊನೆಗೆ ಕುವೆಂಪು ಹೇಳುವ ‘ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ’ ಎಂಬ ಅತ್ಯಂತಿಕ ಸ್ಥಿತಿಗೆ ಬಂದು ನಿಲ್ಲುತ್ತದೆ.
ವಿಶ್ವಮಾನವ ಅಥವಾ ವಿಶ್ವ ನಾಗರಿಕ ಮತ್ತು ವಿಶ್ವಪ್ರಜ್ಞೆಯ ಪಾತಾಳಿಯಲ್ಲಿ ವಿಶ್ಲೇಷಣೆಗೆ ಪಕ್ಕಾಗುವ ರಾಮ ಮನೋಹರ ಲೋಹಿಯಾರ ‘ಭರತಭೂಮಿ, ಭೂಮಿತಾಯಿ’ ಬರಹವು ಎಲ್ಲರೂ ಭೂ ತಾಯಿ ಮಕ್ಕಳು ಎಂದು ಹೇಳುತ್ತಲೇ ಸೀಮಿತ ನೆಲೆಯಿಂದ ಬಹುಮಿತ ನೆಲೆಯತ್ತ ತನ್ನ ಮೈಚಾಚುತ್ತದೆ. ಈ ಎಳೆಯ ಅರ್ಥ ಸಾಧ್ಯತೆಯನ್ನು ಮುಂದುವರಿಸಿದರೆ, ಭೂಮಿಯ ಮೇಲಿರುವ ನೀರೆಲ್ಲವೂ ಒಂದೇ. ಕೊಳಕು ನೀರೆಂಬುದು ನಮ್ಮಗಳ ಕರ್ಮಫಲ ಅಷ್ಟೆ. ಈ ಧಾರ್ಮಿಕ ಮೇಳಗಳು ಸೀಮಿತ ನೆಲೆಯಿಂದ ಬಹುಮಿತ ನೆಲೆಗೆ ಹೊರಳಿಕೊಳ್ಳಬೇಕಿದೆ. ಧರ್ಮ ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿರಿಸಿದಂತೆ ಜನರನ್ನಿರಿಸಬಾರದು. ಸುಡುವುದು ಬಟ್ಟೆಯೇ ಹೊರತು ಬೆಂಕಿಯಲ್ಲವಲ್ಲ. ಆ ಬೆಂಕಿಯನ್ನೇ ಬೆಳಕಾಗಿಸಿ ವ್ಯಕ್ತಿಯ ಜೋಳಿಗೆಯಲ್ಲಿರಿಸಬೇಕಾಗುತ್ತದೆ. ಈ ಹೊತ್ತು ಧರ್ಮದ ವಕ್ತಾರರು ಮತ್ತು ಕೆಲವು ಮಾಧ್ಯಮಗಳು ಈ ಬೆಂಕಿಯನ್ನು ಧಗ ಧಗಿಸುವ ಹಾಗೆ ವ್ಯಾಖ್ಯಾನಿಸುತ್ತಿದ್ದಾರೆ.
ಈಗ ಘಟಿಸಿರುವ ಕಾಲ್ತುಳಿತ ಪ್ರಕರಣವು ಎಲ್ಲ ಕಾಲದಲ್ಲೂ ಪುನಾರಾವೃತ್ತಿಗೊಳ್ಳುವ ಸಾವಿನ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ. ಈ ಸಾವುಗಳನ್ನು ಮೋಕ್ಷಕ್ಕೆ ಲಗತ್ತಿಸಿ ಪುಣ್ಯ ಸ್ವರ್ಗದ ಪ್ರಭಾವಳಿ ನಿರ್ಮಿಸುತ್ತಿದ್ದಾರೆ. ದುರಂತವನ್ನು ತೀರಾ ಲಘುವಾಗಿ ಪರಿಗಣಿಸಿ ದುಃಖದ ಛಾಯೆಯನ್ನು ಗೌಣವಾಗಿಸಿ ಸಾಧಿಸುವ ಫಲ ಗುಟ್ಟಾಗೇನೂ ಉಳಿದಿಲ್ಲ. ನಡುಬಗ್ಗಿಸಿ ಸ್ಥಾವರೀಕರಿಸುವ ಧಾರ್ಮಿಕ ಯಾಜಮಾನ್ಯ ಧೋರಣೆ ಇದಾಗಿದೆ. ಜಡಭರತರ ‘ಸತ್ತವರ ನೆರಳು’
ನಾಟಕವು ಮಠಕ್ಕೆ ಬರುವ ಭಕ್ತರ ಲೆಕ್ಕವನ್ನು ಅಲ್ಲಿನ ಮೆಟ್ಟಿಲುಗಳ ಸವೆಯುವಿಕೆಯ ಮೇಲೆ ಅಳೆಯುವುದನ್ನು ಮಾರ್ಮಿಕವಾಗಿ ಚಿತ್ರಿಸಿದರೆ, ತೇಜಸ್ವಿಯವರು ‘ಸ್ವರೂಪ’ ಕಥನದಲ್ಲಿ ಈರಪ್ಪನ ಪಾತ್ರವು ಧರ್ಮದ ವಿಷವರ್ತುಲದಲ್ಲಿ ಸಿಕ್ಕಿಕೊಂಡಿರುವ ಬಗೆಯನ್ನು ಆತ ತೋಳಿನಲ್ಲಿ ಕಟ್ಟಿಕೊಂಡಿರುವ ತಾಯಿತಗಳ ಮೂಲಕ ಹೇಳುತ್ತಾರೆ. ಪುರಾಣಗಳನ್ನು ಭಗ್ನಗೊಳಿಸಿ ಸಮ ಸಮಾಜದ ಆಶಯವನ್ನು ಬಿತ್ತಲೆತ್ನಿಸಿದ ಕುವೆಂಪುರವರ ಯುಗಯುಗದ ದಾರಿದ್ರ್ಯ ಭಾರದಿಂದ ಬೆನ್ನು ಬಾಗಿ ಗೋಳಿಡುವ ಬಡ ಜನರೆ ಏಳಿರೈ ಏಳಿ! ಎಂಬ ಕರೆಯನ್ನು ಒಳಗು ಮಾಡಿಕೊಳ್ಳಬೇಕಿದೆ. ಏಕೆಂದರೆ, ಧಾರ್ಮಿಕ ಮಾಲೀಕತ್ವವನ್ನು ಇಂತಹ ಕತೆಗಳ ಮುಖಾಂತರ ಉಡದಂತೆ ಹಿಡಿದಿಟ್ಟುಕೊಳ್ಳುತ್ತಾರೆ. ಆಗಾಗ ಸಂಭವಿಸುವ ಇಂತಹ ಧಾರ್ಮಿಕ ಮೇಳಗಳು ತುಣುಕು ತುಣುಕುಗಳಾಗಿ ಕಾಣುತ್ತವೆ. ಅದರಲ್ಲೂ ಇದರ ನಡುವೆ ವಿಶೇಷ ದಿನಗಳೆಂದು ವೈಭವೀಕರಿಸುವುದು ಸಹ ಜನರ ಬುದ್ಧಿಯನ್ನು ಮಂಕಾಗಿಸಿ ವಿಚಾರವನ್ನೇ ಸಾಯಿಸುವ ಕೇಡಿತನವಾಗಿ ಕಾಣುತ್ತದೆ.
ಅಧೀನತೆಯ ಆವರಣವನ್ನು ರಚಿಸುವ ಇನ್ನೊಂದು ಹಾದಿ ಇದೆಂದು ತಿಳಿಯಬೇಕಿದೆ. ಅದಕ್ಕೆ ಇರಬೇಕು ರವೀಂದ್ರನಾಥ ಠಾಕೂರರು ‘ಗೋರ’ ಕಾದಂಬರಿಯಲ್ಲಿ ಈ ದರಿದ್ರ ದೇಶದಲ್ಲಿ ಶುಭ ದಿನಗಳು ಪಂಚಾಂಗದಲ್ಲಿ ಸಿಗುವುದೇ ಕಷ್ಟ ಎಂದು ಉಸುರಿದ್ದು. ಅನೇಕರು ಉದೋಗ್ಯ ಸೃಷ್ಟಿಯ ಬಗ್ಗೆ ದನಿ ಎತ್ತಿದ್ದಾರೆ. ಹಾಗೆಂದು ವರ್ಷಾಪೂರ್ತಿ ನೀರಿನಲ್ಲಿ ಮುಳುಗುವ ಮೇಳಗಳನ್ನು ಆಯೋಜಿಸಬೇಕಾಗುತ್ತದೆ. ಯಾವುದೇ ಪ್ರದೇಶದ ನೀರಿನಲ್ಲಿ ಮುಳುಗೆದ್ದರೂ ಅದರ ಮಿತಿ ಚರ್ಮದ ಮೇಲಿನ ಕೊಳೆಯನ್ನು ತೆಗೆಯಲಷ್ಟೇ ಶಕ್ತವೇ ಹೊರತು ಪಾಪಗಳ ಕೂಪವನ್ನಲ್ಲ. ಲೇಡಿ ಮ್ಯಾಕ್‌ಬೆತ್ ತನ್ನ ಕೈಗಳಿಗಂಟಿಕೊಂಡಿರುವ ರಕ್ತವನ್ನು ನೀರಿಂದ ಎಷ್ಟು ತೊಳೆದರೂ ಹೋಗುತ್ತಿಲ್ಲ -ಷೇಕ್ಸ್‌ಪಿಯರ್ ಪಾಪಗಳ ಕೂಪವನ್ನು ಹೀಗೂ ಹೇಳಬಲ್ಲ. ಬಸವಣ್ಣನಂತಹ ಘನ ವ್ಯಕ್ತಿತ್ವವೇ ‘ಎನ್ನ ಮನಸ್ಸು ಅತ್ತಿಯ ಹಣ್ಣು ನೋಡಯ್ಯಾ, ವಿಚಾರಿಸಿದರೆ ಏನೂ ಹುರುಳಿಲ್ಲವಯ್ಯಾ’ ಎಂದು ಬಡ ಬಡಿಸುತ್ತಿರುವಾಗ ಇನ್ನು ಮಿಕ್ಕೆಲ್ಲವರ ಪಾಡು!
ಕೊನೆಯಂದು ಮಾತು: ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬಯಸಿದ ಭಾರತ ಇದಾಗಿರಲಿಲ್ಲ. ಬಾಬಾ ಸಾಹೇಬರು ಕಟ್ಟಲೆತ್ನಿಸಿದ ಗ್ರಂಥಾಲಯಗಳ ಭಾರತಕ್ಕೂ ಈಗ ಕಟ್ಟಲ್ಪಡುತ್ತಲೇ ಇರುವ ದೇವಾಲಯಗಳ ಭಾರತಕ್ಕೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ!
– ಗೌರ ವೆಂಕಟೇಶ್ ಆರ್.ಡಿ.
ಲೇಖಕ, ಉಪನ್ಯಾಸಕ
ಮೊ: 94832 47397