ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿ ಎಂದು ಹೇಳಿ ಬೆಂಗಳೂರಿನಲ್ಲಿ ಯುವತಿಯರ ರೂಂಗಳಿಗೆ ತೆರಳಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಆತ ಹೋಮ್‌ಗಾರ್ಡ್ ಅಗಿದ್ದು, ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ರಾತ್ರಿ ಯುವತಿಯರ ರೂಮ್‍ಗೆ ನುಗ್ಗಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ಕೊಡುತ್ತಿದ್ದ. ಬೆಂಗಳೂರಿನ ಕಾಲೇಜೊಂದರಲ್ಲಿ 2ನೇ ವರ್ಷದ ಬಿಎಸ್‍ಸಿ ಓದುತ್ತಿದ್ದ ಕೇರಳದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಮ್ ಮಾಡಿಕೊಂಡಿದ್ದಳು. ಜ.25ರಂದು ಊಟ ಮಾಡಿ ಮಲಗಿದ್ದಾಗ ಆರೋಪಿ ಬಾಗಿಲು ತಟ್ಟಿದ್ದ, ಬಾಗಿಲು ತೆಗೆದಾಗ ಪೊಲೀಸ್ ಎಂದು ಹೇಳಿ ಒಳಗೆ ಹೋಗಿದ್ದ. ಆತ ಒಳಗೆ ಬರುತ್ತಿದ್ದಂತೆ ಯುವತಿ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದಾರೆ ಎಂದು ತಿಳಿಸಿದ್ದಳು.
ಆರೋಪಿ ಡೋರ್ ಲಾಕ್ ಮಾಡಿ ಎಲ್ಲರ ಮೊಬೈಲ್‍ನ್ನು ಹೆದರಿಸಿ ಕಸಿದುಕೊಂಡಿದ್ದ. ಅಶ್ಲೀಲವಾಗಿ ಮಾತನಾಡಿದ್ದ. ಯುವತಿ ಕರೆ ಮಾಡಿದ್ದಕ್ಕೆ ಬಂದಿದ್ದ ಆಕೆಯ ಸ್ನೇಹಿತರ ಮೊಬೈಲ್ ವಶಕ್ಕೆ ಪಡೆದು ಯುವತಿಯರನ್ನು ಮಂಡಿಕಾಲಿನಲ್ಲಿ ನಿಲ್ಲಿಸಿ ಕಿರುಕುಳ ನೀಡಿದ್ದ. ಬಳಿಕ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಸ್ಥಳಕ್ಕೆ ಸದಾಶಿವನಗರ ಠಾಣೆ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದಾರೆ. 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಹೇಳಿ ಕೊಂಡು ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಆರೋಪಿ ಕಿರುಕುಳ ಕೊಡುತ್ತಿದ್ದ. ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.