ಎನ್ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇವರು ಭಾರತದ 15ನೇ ಉಪರಾಷ್ಟ್ರಪತಿ. ರಾಧಾಕೃಷ್ಣನ್ ಅವರು ಪ್ರತಿಸ್ಪರ್ಧಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ 452 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಪಡೆದಿದ್ದಾರೆ.
ಇಂಡಿಯಾ ಬಣದ ಜಂಟಿ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿತ್ತು. ರಾಧಾಕೃಷ್ಣನ್ ಅವರಿಗೆ ಬಿಜೆಪಿ, ಟಿಡಿಪಿ, ಜೆಡಿಯು, ಶಿವಸೇನೆ, ಎನ್‌ಸಿಪಿ, ಎಜಿಪಿ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಆರ್‌ಎಲ್‌ಡಿ, ಜೆಡಿಎಸ್ ಮತ್ತು ಎಐಎಡಿಎಂಕೆ ವೈಎಸ್‌ಆರ್‌ಸಿಪಿ ಬೆಂಬಲ ನೀಡಿವೆ.
ಸುದರ್ಶನ್ ರೆಡ್ಡಿ ಅವರಿಗೆ ಕಾಂಗ್ರೆಸ್, ಡಿಎಂಕೆ, ಎಸ್‌ಪಿ, ಟಿಎಂಸಿ, ಜೆಎಂಎಂ, ಎಎಪಿ, ಆರ್‌ಜೆಡಿ, ಯುಬಿಟಿ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎಸ್‌ಪಿ) ಮತ್ತು ಎಡ ಪಕ್ಷಗಳು ಸೇರಿದಂತೆ ಇತರ ಪಕ್ಷಗಳು ಬೆಂಬಲ ನೀಡಿದವು.
ಬಿಜೆಡಿ, ಬಿಆರ್‌ಎಸ್ ಮತ್ತು ಎಸ್‌ಎಡಿ ಸೇರಿದಂತೆ ಹಲವು ಪಕ್ಷಗಳು ಮತದಾನದಿಂದ ದೂರ ಉಳಿದವು.
ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಮತ್ತು ಎರಡು ಬಾರಿ ಲೋಕಸಭಾ ಸಂಸದರಾಗಿದ್ದ ರಾಧಾಕೃಷ್ಣನ್ ಅವರು ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈಗ ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ಕೊಂಗು ಪ್ರದೇಶದ ತಿರುಪ್ಪೂರಿನಲ್ಲಿ ಅಕ್ಟೋಬರ್ 20, 1957 ರಂದು ಜನಿಸಿದ ರಾಧಾಕೃಷ್ಣನ್ , 17ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದರು. ಭಾರತೀಯ ಜನತಾ ಪಕ್ಷ ಕಾರ್ಯಕರ್ತರಾಗಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ, ಎರಡು ಬಾರಿ ಸಂಸದರಾಗಿ, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.