ಕೋವಿಡ್-19 ಸೋಂಕು ಮತ್ತು ಕೋವಿಡ್ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಆಗಿರುವುದು ವೈದ್ಯಕೀಯ ಸಂಶೋಧನೆಗಳಿಂದ ಪತ್ತೆಯಾಗಿದೆ ಎಂದು ನಿಮ್ಹಾನ್ಸ್ ವೈದ್ಯರ ಸಂಶೋಧನಾ ವರದಿ ಹೇಳಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ ಡಾ. ಎಂ.ನೇತ್ರಾವತಿ ಅವರ ನೇತೃತ್ವದಲ್ಲಿ ನಡೆದಿರುವ ಅಧ್ಯಯನದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಕೋವಿಡ್ ಸೋಂಕಿನ ಮೊದಲ ಅಲೆ ಮತ್ತು ನಂತರ ನೀಡಲಾಗಿದ್ದ ಕೋವಿಡ್ ಲಸಿಕೆಯಿಂದ ನರಮಂಡಲದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಿದೆ ಎನ್ನುವ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು.
2020ರ ಮಾರ್ಚ್ ಮತ್ತು ಸೆಪ್ಟೆಂಬರ್ ಮಧ್ಯೆ ದಾಖಲಾಗಿದ್ದ 3200 ನರರೋಗಿಗಳನ್ನು ಅದ್ಯಯನಕ್ಕೆ ಒಳಪಡಿಸಲಾಗಿದ್ದು, ಇವರಲ್ಲಿ 120 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಇವರಲ್ಲಿ ಮೂರರಿಂದ 84 ವರ್ಷದ ಒಳಗಿನವರಿದ್ದು, ಸರಾಸರಿ 49 ವಯಸ್ಸಿನವರು ಹೆಚ್ಚಿದ್ದರು. ಕೋವಿಡ್ ವೈರಸ್ ಸೋಂಕಿನಿಂದಾಗಿ ನೇರವಾಗಿ ನರಮಂಡಲಕ್ಕೆ ಸಮಸ್ಯೆ ಆಗಿದೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.
2021ರ ಮೇ ತಿಂಗಳಿನಿಂದ ಡಿಸೆಂಬರ್‌ವರೆಗೆ ಕೋವಿಡ್ ಲಸಿಕೆ ಪಡೆದ 42 ದಿನಗಳ ಬಳಿಕ ನರ ರೋಗ ಸಮಸ್ಯೆಗೆ ಒಳಗಾಗಿ ನಿಮ್ಹಾನ್ಸ್‌ಗೆ ದಾಖಲಾದ 116 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 29 ಮಂದಿಗೆ ವ್ಯಾಕ್ಸಿನ್ ನೀಡಿದ ಬಳಿಕ ಇಮ್ಯೂನ್ ಸಿಸ್ಟಂ ತೊಂದರೆಯಿಂದ ನರರೋಗ ಸಮಸ್ಯೆ ಕಂಡು ಬಂದಿದೆ. 27 ಮಂದಿ ಕೋವಿಶೀಲ್ಡ್ ಲಸಿಕೆ ಪಡೆದವರಾಗಿದ್ದರೆ. ಇಬ್ಬರು ಕೋವ್ಯಾಕ್ಸಿನ್ ಲಸಿಕೆ ಪಡೆದವರಿದ್ದರು. ಇವರಿಗೆ ಮೊದಲ ಡೋಸ್ ಪಡೆದ 16 ದಿನಗಳ ಬಳಿಕ ತೊಂದರೆ ಎದುರಾಗಿತ್ತು. ಸಾರ್ವತ್ರಿಕವಾಗಿ ನೋಡಿದರೆ ಕೋವಿಡ್ ಸೋಂಕು ಮತ್ತು ಲಸಿಕೆ ಯಿಂದಾಗಿ ನರರೋಗ ಸಮಸ್ಯೆಗೀಡಾದವರ ಸಂಖ್ಯೆ ಆತ್ಯಲ್ಪ ಎಂದು ವರದಿಯಲ್ಲಿ ವೈದ್ಯರು ತಿಳಿಸಿದ್ದಾರೆ.