ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಲಗಲು ಹೆಚ್ಚುವರಿ ಹಾಸಿಗೆ ಮತ್ತು ದಿಂಬು ಬೇಕೆಂದು ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ನಿರಾಕರಿಸಿದೆ. ಜೈಲಿನ ಕೈಪಿಡಿ ಪ್ರಕಾರ ಸವಲತ್ತುಗಳನ್ನು ಮಾತ್ರ ನೀಡಲಾಗುತ್ತದೆ. ತಿಂಗಳಿಗೆ ಒಂದು ಬಾರಿ ಚಾದರ್ ಮತ್ತು ಬಟ್ಟೆ ಬದಲಿಸಲು ಸೂಚನೆ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ಜೈಲು ಅಧಿಕಾರಿಗಳು ಹೆಚ್ಚುವರಿ ಹಾಸಿಗೆ-ದಿಂಬು ನೀಡಲು ನಿರಾಕರಿಸಿದ ಕಾರಣ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಅಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ, ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್ಶೀಟ್ ನೀಡಿಲ್ಲ
ಎಂದು ದರ್ಶನ್‌ಪರ ವಕೀಲರು ಕೋರ್ಟ್‌ಗೆ ಈ ಹಿಂದೆ ತಿಳಿಸಿದ್ದರು.
ಈ ಅರ್ಜಿಯ ಬಗ್ಗೆ ಹಲವು ಬಾರಿ ವಾದ-ಪ್ರತಿವಾದಗಳು ನಡೆದಿದ್ದವು, ಜೈಲಿಗೆ ಕಾನೂನು ಪ್ರಾಧಿಕಾರ ಸದಸ್ಯರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ವಾದಗಳನ್ನು ಆಲಿಸಿದ್ದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದರು. ಆರೋಪಿ ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ. ದರ್ಶನ್ ಕೇಳಿದಂತೆ ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇತರ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ.
ಬೇರೆ ಬ್ಯಾರಕ್ಗೆ ಸಹ ಸ್ಥಳಾಂತರ ಮಾಡುವಂತೆಯೂ ದರ್ಶನ್ ಕೇಳಿಕೊಂಡಿದ್ದರು. ಬೇರೆ ಬ್ಯಾರಕ್ಗೆ ಸ್ಥಳಾಂತರಿಸುವ ನಿರ್ಣಯವನ್ನು ಜೈಲು ಅಧಿಕಾರಿಗಳು ಕೈಗೊಳ್ಳಲಿ ಎಂದು ನ್ಯಾಯಾಲಯ ತಿಳಿಸಿದೆ.
ದರ್ಶನ್ ಬ್ಯಾರಕ್ನಲ್ಲಿ ಬೆಳಕು ಬರುವುದಿಲ್ಲ. ಬಿಸಿಲು ಕಾಣದೆ ಫಂಗಸ್ ಆಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು, ಭದ್ರತೆ ದೃಷ್ಟಿಯಿಂದ ಬೇರೆ ಬ್ಯಾರಕ್ಗೆ ಅವರನ್ನು ಸ್ಥಳಾಂತರ ಮಾಡಿಲ್ಲ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.
ಪವಿತ್ರಾಗೌಡ, ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ತಮ್ಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಅರ್ಜಿ ಹಾಕಿದ್ದ, ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.


