ಮಕ್ಕಳನ್ನು ಪತ್ನಿ ಜೊತೆ ಬಿಡಲು ಕೋರ್ಟ್ ಆದೇಶಿಸಿದ್ದಕ್ಕೆ ವ್ಯಕ್ತಿ ಎರಡು ಮಕ್ಕಳಿಗೆ ವಿಷವುಣಿಸಿ ಸಾಯಿಸಿದ ಬಳಿಕ ತಾಯಿ ಜೊತೆ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಯೊಂದು ಕೇರಳದಲ್ಲಿ ನಡೆದಿದೆ.
ಮಗಳು ಹಿಮಾ(6), ಮಗ ಕಣ್ಣನ್‌ಗೆ(2) ವಿಷ ನೀಡಿದ ಬಳಿಕ ತಾಯಿ ಉಷಾ(65) ಜೊತೆಗೆ ಕಲಾಧರನ್(36) ನೇಣು ಬಿಗಿದುಕೊಂಡಿದ್ದಾನೆ. ರಾಮಂತಳಿಯ ಸೆಂಟ್ರಲ್ ನಿವಾಸಿ ಕಲಾಧರನ್ ಹಾಗೂ ಪತ್ನಿ ಜೊತೆಗಿರಲಿಲ್ಲ. ಎರಡು ಮಕ್ಕಳು ಕಲಾಧರನ್ ಜೊತೆಗಿದ್ದರು. ವಿಚ್ಛೇದನ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿ ಮಕ್ಕಳನ್ನು ಪತ್ನಿಯ ಸುಪರ್ದಿಗೆ ನೀಡಬೇಕೆಂದು ತಿಳಿಸಿತ್ತು. ಮಕಳನ್ನು ಪತ್ನಿಯ ವಶಕ್ಕೆ ಕೊಡುವಂತೆ ಕಲಾಧರನ್ ತಂದೆ ಉಣ್ಣಿಕೃಷ್ಣನ್‌ಗೆ ಪೊಲೀಸರು ಫೋನ್ ಮಾಡಿ ತಿಳಿಸಿದ್ದರು.
ಕೋರ್ಟ್ ಆದೇಶ ಕಲಾಧರನ್‌ಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಎರಡು ಮಕ್ಕಳಿಗೂ ವಿಷವುಣಿಸಿ ತನ್ನ ತಾಯಿಯ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತಂದೆ ಉಣ್ಣಿಕೃಷ್ಣನ್ ರಾತ್ರಿ ಮನೆಗೆ ಬಂದಾಗ ಯಾರೂ ಬಾಗಿಲು ತೆರೆಯಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಬಂದು ಬಾಗಿಲು ತೆಗೆದಾಗ ಪ್ರಕರಣ ಬಯಲಾಗಿದೆ. ರಾಮಂತಳಿ ಪೊಲೀಸರು ತನಿಖೆ ಆರಂಭಿಸಿದ್ದಾರೆ


