ಭೂಪಲ್: ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ.
ಮಧ್ಯಪ್ರದೇಶದ ಹೈಕೋರ್ಟ್ ಸೂಚನೆ ಮೇರೆಗೆ ಸಚಿವ ಹಾಗೂ ಬಿಜೆಪಿ ಮುಖಂಡರ ವಿಜಯ್ ಶಾ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಹಿಂದಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವಿವರಗಳನ್ನು ನೀಡುತ್ತಿದ್ದ ಭಾರತೀಯ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿ ಆಗಿರುವ ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶದ ಬುಡಕಟ್ಟು ಕ್ಷೇಮಾಭಿವೃದ್ಧಿ ಸಚಿವ ವಿಜಯ್ ಶಾ ನಾಲಗೆ ಹರಿಬಿಟ್ಟಿದ್ದರು.
ಭಯೋತ್ಪಾದಕರ ಸೋದರಿ ಆಗಿರುವ ಸೋಫಿಯಾ ಖುರೇಷಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿಗೆ ಕಳುಹಿಸಿದ್ದಾರೆ. ಭಾರತದ ಸೇನೆಯಲ್ಲಿ ಇರುವವರನ್ನು ಸೇವೆಯಿಂದ ವಜಾಗೊಳಿಸಿ ತಕ್ಕ ಪಾಠ ಕಲಿಸಿ ಎಂದು ಹೇಳಿಕೆ ನೀಡಿದ್ದರು.
ಇಂಧೋರ್ ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ಶಾ, ನಮ್ಮ ಸೋದರಿಯರ ಸಿಂಧೂರ ಅಳಿಸಿದ ಇಂತಹವರನ್ನು ಶಿಕ್ಷಿಸಬೇಕು. ನಮ್ಮ ಹಿಂದೂಗಳನ್ನು ಬಟ್ಟೆ ಬಿಚ್ಚಿ ಕೊಂದ ಉಗ್ರರ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಭಯೋತ್ಪಾದಕರ ಸೋದರಿಯನ್ನೇ ಮುಂದೆ ಕಳುಹಿಸಿದರು. ಉಗ್ರರ ಬಟ್ಟೆ ಬಿಚ್ಚಿಸಿ ಹೊಡೆಯಲು ಅವರದ್ದೇ ಸಮುದಾಯದವರನ್ನು ಮೋದಿ ಕಳುಹಿಸಿದರು ಎಂದು ಅವರು ಆರೋಪಿಸಿದರು.
ವಿಜಯ್ ಶಾ ಅವರ ಹೇಳಿಕೆಗೆ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬುಧವಾರ ನನ್ನ ಹೇಳಿಕೆಗಳನ್ನು ಬೇಷರತ್ ಆಗಿ ವಾಪಸ್ ಪಡೆಯುತ್ತೇನೆ. ಸೋಫಿಯಾ ಖುರೇಷಿ ವಿರುದ್ಧ ನೀಡಿದ ಹೇಳಿಕೆಗೆ ನಾನು 10 ಬಾರಿಯಾದರೂ ಕ್ಷಮೆಕೋರುತ್ತೇನೆ ಎಂದು ಹೇಳಿದ್ದಾರೆ.