ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಇತರ ಐದು ಅಧಿಕಾರಿಗಳ ವಿರುದ್ಧ ಷೇರು ಮಾರುಕಟ್ಟೆ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲು ಮುಂಬೈ ಭ್ರಷ್ಟಾಚಾರ ನಿಗ್ರಹ ದಳ ನ್ಯಾಯಾಲಯ ಆದೇಶ ನೀಡಿದೆ.
ಸಪನ್ ಶ್ರೀವಾಸ್ತವ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿ, ತಾನೇ ತನಿಖೆಯ ಮೇಲ್ವಿಚಾರಣೆ ಮಾಡುತ್ತೇನೆ. ತಿಂಗಳೊಳಗೆ ಪ್ರಕರಣದ ವರದಿಯನ್ನು ನೀಡಬೇಕು ಎಂದು ಸೂಚನೆ ನೀಡಿದೆ.
ಇದೊಂದು ಕ್ಷುಲ್ಲಕ ಅರ್ಜಿಯಾಗಿದ್ದು, ಕೋರ್ಟ್ ಯಾವುದೇ ಸೂಚನೆ ಮತ್ತು ತನ್ನ ವಾದವನ್ನು ದಾಖಲಿಸಲು ಅವಕಾಶವನ್ನು ನೀಡದೇ ಅರ್ಜಿಯನ್ನು ಪುರಸ್ಕರಿಸಿದೆ ಎಂದು ಸೆಬಿ ಪ್ರತಿಕ್ರಿಯಿಸಿದೆ. ಪ್ರಕರಣದ ಆರೋಪಿಗಳೆಂದು ಹೆಸರಿಸಲಾದ ಅಧಿಕಾರಿಗಳು ಆ ಸಮಯದಲ್ಲಿ ತಮ್ಮ ಹುದ್ದೆಗಳನ್ನು ಹೊಂದಿರಲಿಲ್ಲ. ಅರ್ಜಿದಾರರು ಹಿಂದೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ದಂಡವನ್ನೂ ವಿಧಿಸಿತ್ತು ಎಂದು ತಿಳಿಸಿದೆ.