ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟ ದರ್ಶನ್ ವಿಚಾರಣೆ ಹಾಜರಾಗದಿರುವುದಕ್ಕೆ 57ನೇ ಸಿಸಿಹೆಚ್ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ದರ್ಶನ್ ಪರ ವಕೀಲರು, ದರ್ಶನ್ ಅವರಿಗೆ ಬೆನ್ನು ನೋವಿರುವ ಕಾರಣ ವಿಚಾರಣೆಗೆ ಬರದಿರುವುದಕ್ಕೆ ವಿನಾಯಿತಿ ಕೋರಿದರು. ಈ ವೇಳೆ ಅಸಮಾಧಾನಗೊಂಡ ನ್ಯಾಯಾಧೀಶರು, ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆಗೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು ಎಂದರು.
ದರ್ಶನ್ ಮನೆಯಿಂದ ಜಪ್ತಿ ಮಾಡಿಕೊಂಡಿದ್ದ 75 ಲಕ್ಷ ರೂ. ಬಿಡುಗಡೆ ದರ್ಶನ್ ವಕೀಲರು ಮನವಿ ಮಾಡಿದರು. ಈ ವೇಳೆ ಕೋರ್ಟ್, ಆದಾಯ ತೆರಿಗೆ ಇಲಾಖೆ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಹೇಳಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿತು. ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್ ಹಿಂತಿರುಗಿಸಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು.
ವಿಚಾರಣೆಗೆ ಪವಿತ್ರಾ ಗೌಡ ಮತ್ತು ಉಳಿದ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ಇದೆ.