Menu

ಬಾಡಿಗೆ ತಾಯ್ತನದಲ್ಲಿ ಸ್ವಂತ ಮಗುವಿಗಾಗಿ 35 ಲಕ್ಷ ರೂ. ವೆಚ್ಚ ಮಾಡಿದ್ದ ದಂಪತಿಗೆ ವೈದ್ಯೆಯಿಂದ ಮೋಸ

ಹೈದರಾಬಾದ್‌ ನಿವಾಸಿಗಳಾಗಿರುವ ರಾಜಸ್ಥಾನದ ದಂಪತಿ ಮಕ್ಕಳಿಲ್ಲದ ಕೊರತೆ ನೀಗಿಸಿಕೊಳ್ಳಲು ತಮ್ಮದೇ ಮಗುವನ್ನು ಪಡೆಯುವುದಕ್ಕಾಗಿ ೩೫ ಲಕ್ಷ ರೂ. ವೆಚ್ಚ ಮಾಡಿ, ಬಾಡಿಗೆ ತಾಯ್ತನದ ಹೆಸರಲ್ಲಿ ಬೇರೆ ಯಾರದೋ ಮಗುವನ್ನು ಅವರಿಗೆ ನೀಡುವ ಮೂಲಕ ವೈದ್ಯೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ವೈದ್ಯೆಯು ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ನೀವು ನಿಮ್ಮ ಮಗುವನ್ನು ಪಡೆದುಕೊಳ್ಳಿ ಎಂದು ಮಗುವನ್ನು ನೀಡಿದ್ದು, ಆದರೆ ಈ ದಂಪತಿಗೆ ಮಗುವಿನಲ್ಲಿ ತಮ್ಮ ಯಾವುದೇ ಅನುವಂಶೀಯ ಕಾಣಿಸದೆ ಅನುಮಾನಗೊಂಡು ಬೇರೆ ಆಸ್ಪತ್ರೆಯಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಿದಾಗ ಮಗು ಅವರದ್ದಲ್ಲ ಎಂಬುದು ತಿಳಿದು ಬಂದಿದೆ. ನೊಂದ ದಂಪತಿ ಪೊಲೀಸ್ ದೂರು ನೀಡಿದ್ದರು.

ದೂರು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಹೈದರಾಬಾದ್‌ನಲ್ಲಿ ಅಕ್ರಮವಾಗಿ ಬಾಡಿಗೆ ತಾಯ್ತನ ಹಾಗೂ ವೀರ್ಯ ಕಳ್ಳಸಾಗಣೆ ಮಾಡುತ್ತಿದ್ದ ಕ್ಲಿನಿಕ್‌ ಮೇಲೆ ದಾಳಿ ಮಾಡಿದ್ದು, ವೈದ್ಯರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿದೆ. ಬಾಡಿಗೆ ತಾಯ್ತನದ ಮೂಲಕ ತಮ್ಮದೇ ಮಗು ಪಡೆಯಲು ಬಯಸುವ ದಂಪತಿ ತಮ್ಮ ಅಂಡಾಣು ಹಾಗೂ ವೀರ್ಯಾಣುವನ್ನು ಮತ್ತೊಬ್ಬ ಮಹಿಳೆಯ(ಬಾಡಿಗೆ ತಾಯಿ) ಗರ್ಭದಲ್ಲಿ ಕೃತಕವಾಗಿ ಧಾರಣೆ ಮಾಡುವ ಮೂಲಕ ಮಗುವನ್ನು ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬಾಡಿಗೆ ತಾಯಿಗೆ ದಂಪತಿ ವೈದ್ಯಕೀಯ ವೆಚ್ಚ ಹಾಗೂ ಲಕ್ಷಾಂತರ ರೂಪಾಯಿ ಆರ್ಥಿಕ ನೆರವು ನೀಡುತ್ತಾರೆ.

ಆದರೆ ಈ ಪ್ರಕರಣದಲ್ಲಿ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಬೇರೆಯವರ ವೀರ್ಯ ಹಾಗೂ ಅಂಡಾಣುವಿನಿಂದ ಜನಿಸಿದ ಮಗುವನ್ನು ಆಸ್ಪತ್ರೆಯ ವೈದ್ಯೆ ನೀಡಿ ಮೋಸ ಮಾಡಿದ್ದಾರೆ. ಮಗು ಪಡೆದ ದಂಪತಿ ಬಾಡಿಗೆ ತಾಯಿಯ ಡಿಎನ್‌ಎ ಪರಿಶೀಲನೆಗೆ ವಿನಂತಿಸಿದಾಗ ಡಾ. ನಮ್ರತಾ ಒಪ್ಪಿರಲಿಲ್ಲ. ಹೀಗಾಗಿ ಅವರು ದೆಹಲಿಯಲ್ಲಿ ಈ ಪರೀಕ್ಷೆ ನಡೆಸಿದಾಗ ಅವರ ಅನುಮಾನ ನಿಜವಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೈದರಾಬಾದ್‌ನ ಸಿಕಂದರಾಬಾದ್‌ನ ರೆಜಿಮೆಂಟಲ್ ಬಜಾರ್‌ನಲ್ಲಿರುವ ಯೂನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್‌ ಮೇಲೆ ದಾಳಿ ಮಾಡಿದ್ದು, ವ್ಯವಸ್ಥಾಪಕಿ ಡಾ. ನಮ್ರತಾ ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಬಡ ಜನರನ್ನು ಬಾಡಿಗೆ ತಾಯ್ತನಕ್ಕೆ ಆಕರ್ಷಿಸಲಾಗುತ್ತಿತ್ತು ಮತ್ತು ಬಾಡಿಗೆ ತಾಯ್ತನದ ಮೂಲಕ ಮಗು ಮಾಡುವುದಕ್ಕೆ ಬೇಕಾಗುವ ವಸ್ತುಗಳನ್ನು ಅಕ್ರಮವಾಗಿ ಅಂತರರಾಜ್ಯದಲ್ಲಿ ಸಾಗಿಸುವ ವ್ಯವಸ್ಥಿತ ಜಾಲ ಇತ್ತು ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹೈದರಾಬಾದ್ ನಾರ್ತ್‌ ಝೋನ್‌ನ ಉಪ ಕಮೀಷನರ್ ರಶ್ಮಿ ಪೆರುಮಾಳ್ ಹೇಳಿದ್ದಾರೆ.

ಈ ಬಗ್ಗೆ ಡಾ. ನಮ್ರತಾ ಬಳಿ ಹೇಳಿದಾಗ ತಮಗೆ ಗೊಂದಲ ಆಗಿದ್ದಾಗಿ ಒಪ್ಪಿ ಸಮಸ್ಯೆ ಪರಿಹರಿಸಲು ಸಮಯ ಕೇಳಿ ನಾಪತ್ತೆಯಾಗಿದ್ದಾರೆ. ನೊಂದ ದಂಪತಿ ಗೋಪಾಲಪುರಂ ಪೊಲೀಸರನ್ನು ಸಂಪರ್ಕಿಸಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಯುನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ ಮೇಲೆ ತಡರಾತ್ರಿ ದಾಳಿ ನಡೆಸಿ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ದಾಳಿ ಸಮಯದಲ್ಲಿ ನಿರ್ಣಾಯಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ, ಅಲ್ಲಿ ಸಿಕ್ಕ ವೀರ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ.

ಈ ಕ್ಲಿನಿಕ್ ವೀರ್ಯ ಹಾಗೂ ಅಂಡಾಣುಗಳನ್ನು ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದೆ, ಸೃಷ್ಟಿ ಫರ್ಟಿಲಿಟಿ ಸೆಂಟರ್, ಇಂಡಿಯನ್ ಸ್ಪೆರ್ಮ್ ಟೆಕ್ ಎಂಬ ಪರವಾನಗಿ ಪಡೆಯದ ಸಂಸ್ಥೆಯೊಂದಿಗೆ ಸಹಯೋಗ ಹೊಂದಿದೆ. ಇಂಡಿಯನ್ ಸ್ಪರ್ಮ್ ಟೆಕ್‌ ಮೇಲೂ ದಾಳಿ ಮಾಡಿ ಅದರ ಪ್ರಾದೇಶಿಕ ವ್ಯವಸ್ಥಾಪಕ ಪಂಕಜ್ ಸೋನಿ ಜೊತೆಗೆ ಸಂಪತ್, ಶ್ರೀನು, ಜಿತೇಂದರ್, ಶಿವ, ಮಣಿಕಂಠ ಮತ್ತು ಬೊರೊ ಎಂಬ ಆರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ದಂಪತಿಗೆ ಈ ಮಗುವನ್ನು ನೀಡುವುದಕ್ಕಾಗಿ ಹೈದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ವಿಮಾನದ ಮೂಲಕ ಮಹಿಳೆಯನ್ನು ಕರೆತರಲಾಗಿತ್ತು. ಮಹಿಳೆಗೆ ಜನಿಸಿದ ಮಗು ಬಾಡಿಗೆ ತಾಯ್ತನದ ಮೂಲಕ ನಿಮಗೆ ಜನಿಸಿದ್ದು ಎಂದು ಡಾ. ನಮ್ರತಾ ದಂಪತಿಗೆ ಮನವೊಲಿಸಿದ್ದರು ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *