ಮದುವೆಗೆ ಎರಡು ವಾರವಿದ್ದು, ಸಿದ್ಧತೆಯಲ್ಲಿದ್ದ ಜೋಡಿ, ಸಂಭ್ರಮದಿಂದ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಂಡು ಮನೆಗೆ ವಾಪಸ್ ಆಗುವಾಗ ರಸ್ತೆ ಅಪಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ಕೊಪ್ಪಳದ ಗಂಗಾವತಿ ಬಳಿ ನಡೆದಿದೆ. ಬೈಕ್‌ಗೆ ಲಾರಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದ್ದು, ಕರಿಯಪ್ಪ ಮಡಿವಾಳ (26) ಹಾಗೂ ಕವಿತಾ ಪವಾಡೆಪ್ಪ ಮಡಿವಾಳ (19) ಮೃತಪಟ್ಟ ಜೋಡಿ.
ಕವಿತಾ ಹಾಗೂ ಕರಿಯಪ್ಪಗೆ ವಿವಾಹ ನಿಶ್ಚಯವಾಗಿದ್ದು, ಡಿಸೆಂಬರ್ 21ಕ್ಕೆ ಮದುವೆ ನಿಗದಿಯಾಗಿತ್ತು. ಹೀಗಾಗಿ ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗಿದ್ದರು. ಬೆಣಕಲ್ ಬಳಿ ಗುಡ್ಡ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು ಬೆಣಕಲ್ ಬಳಿ ಬೈಕ್ ಲಾರಿಗೆ ಡಿಕ್ಕಿಯಾಗಿದೆ.
ಅಪಘಾತಕ್ಕೆ ಬಾಲಕಿ ಬಲಿ, ತಂದೆ-ತಾಯಿ ಸ್ಥಿತಿ ಗಂಭೀರ
ಚಿಕ್ಕಮಗಳೂರು ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ತಂದೆ, ತಾಯಿ ಮತ್ತು ಸಹೋದರಿಯ ಸ್ಥಿತಿ ಗಂಭೀರವಾಗಿದೆ.
ಗದಗ ಹರ್ತಿ ಗ್ರಾಮದ ಬಳಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮದುವೆ ಆಮಂತ್ರಣ ನೀಡಿ ವಾಪಸ್ ಬರುತ್ತಿದ್ದ ಬಸವರಾಜ್ ಕಮ್ಮಾರ ಹಾಗೂ ಪ್ರಶಾಂತ ಬಡಿಗೇರ್ ಅಪಘಾತದಲ್ಲಿ ಮೃತಪಟ್ಟವರು.
ಬೆಂಗಳೂರು ದಕ್ಷಿಣದ ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯಲ್ಲಿ ಹಾಲಿನ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಪರಾಣಾಪಾಯ ಸಂಭವಿಸಿಲ್ಲ. ಮಂಡ್ಯದ ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಬಳಿ ನಡೆದ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.


