Wednesday, October 29, 2025
Menu

ಬೆಂಗಳೂರಿನಲ್ಲಿ ಕಾರ್‌ ಮಿರರ್‌ಗೆ ಬೈಕ್‌ ಟಚ್‌: ಯುವಕನ ಬೆನ್ನಟ್ಟಿ ಕೊಂದ ದಂಪತಿ

ಕಾರಿನ ಸೈಡ್ ಮಿರರ್‌ಗೆ ಬೈಕ್ ಟಚ್ ಆಗಿದ್ದಕ್ಕೆ ಕೋಪಗೊಂಡ ದಂಪತಿ ಬೈಕ್ ಸವಾರನನ್ನು ಎರಡು ಕಿ.ಮೀವರೆಗೆ ಬೆನ್ನಟ್ಟಿ ಕಾರಿನಿಂದ ಗುದ್ದಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಮನೋಜ್ ಕುಮಾರ್ ಮತ್ತು ಆರತಿ ಶರ್ಮಾ ಕೊಲೆಗೈದ ಬಂಧಿತರು. ದರ್ಶನ್ ಮೃತಪಟ್ಟ ಯುವಕನಾಗಿದ್ದು, ಘಟನೆಯಲ್ಲಿ ಅವನ ಸ್ನೇಹಿತ ವರುಣ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಚ್ಚಿಬೀಳಿಸುವ ಈ ಘಟನೆ ಅಕ್ಟೋಬರ್ 22 ರಂದು ರಾತ್ರಿ ಶ್ರೀರಾಮ ಲೇಔಟ್‌ನಲ್ಲಿ ನಡೆದಿದೆ. ದರ್ಶನ್ ಮತ್ತು ವರುಣ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬೈಕ್ ಮನೋಜ್ ಮತ್ತು ಆರತಿ ಶರ್ಮಾ ದಂಪತಿಯ ಕಾರಿನ ಮಿರರ್‌ಗೆ ತಗುಲಿದೆ. ಇದರಿಂದ ಸಿಟ್ಟಾದ ದಂಪತಿ ಯುವಕರನ್ನು ಎರಡು ಕಿಲೋಮೀಟರ್‌ಗೂ ಹೆಚ್ಚು ಚೇಸ್ ಮಾಡಿ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಡಿಕ್ಕಿಯ ರಭಸಕ್ಕೆ ದರ್ಶನ್ ಮತ್ತು ವರುಣ್‌ ರಸ್ತೆಗೆ ಹಾರಿ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ದರ್ಶನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವರುಣ್‌ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆಯನ್ನು ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಎಂದು ದಾಖಲಿಸಲಾಗಿತ್ತು. ಪುಟ್ಟೇನಹಳ್ಳಿ ಪೊಲೀಸರ ತನಿಖೆಯಿಂದ ಇದು ಉದ್ದೇಶಪೂರ್ವಕ ಕೊಲೆ ಎಂಬ ಸತ್ಯ ಹೊರ ಬಂದಿದೆ. ಕಾರಿನ ಮಿರರ್‌ಗೆ ಟಚ್‌ ಮಾಡಿದ್ದಕ್ಕೆ ದಂಪತಿ ಯುವಕರನ್ನು ಚೇಸ್ ಮಾಡಿ ತಪ್ಪಿಸಿಕೊಂಡ ಬಳಿಕ ಯೂ-ಟರ್ನ್ ಮಾಡಿ ಮತ್ತೆ ಬಂದು ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಕಾರಿನ ಕೆಲವು ಭಾಗಗಳು ರಸ್ತೆಯಲ್ಲಿ ಬಿದ್ದಿದ್ದವು. ಇದನ್ನು ತೆಗೆದುಕೊಳ್ಳಲು ದಂಪತಿ ಮುಖಕ್ಕೆ ಮಾಸ್ಕ್ ಧರಿಸಿ ಮರಳಿ ಸ್ಥಳಕ್ಕೆ ಬಂದಿದ್ದರು. ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *