ಕೋಲಾರದ ಮಾಲೂರಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ೨೦ ಲಕ್ಷ ರೂಪಾಯಿ ವಂಚನೆ ಮಾಡಿರುವ ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕ ದಂಪತಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರಾಧ/ಪಾವನ ಹಾಗೂ ಸತೀಶ್ ಬಂಧಿತರು.
ದಂಪತಿ ನಕಲಿ ಮೀಶೊ ಗಿಫ್ಟ್ ಕಾರ್ಡ್ ಕಳಿಸಿ ಅದರಲ್ಲಿ 10,50,000 ರೂ., 150 ಗ್ರಾಂ ಚಿನ್ನ, ಎರಡು ಐಪೋನ್ ಗೆದ್ದಿರುವುದಾಗಿ ಶಿಕ್ಷಕಿಯನ್ನು ನಂಬಿಸಿದ್ದರು. ಮೊದಲಿಗೆ ಪ್ರೊಸೆಸಿಂಗ್ ಶುಲ್ಕ ಎಂದು ಒಟ್ಟು 20 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ
ಬೆಂಗಳೂರು ಮೂಲದ ಸೈಬರ್ ವಂಚಕ ಜಾಲದಲ್ಲಿರುವ ಈ ದಂಪತಿಯ ಆನ್‌ಲೈನ್ ಮೋಸಕ್ಕೆ ಹಲವರು ಸಿಲುಕಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಏಳು ತಿಂಗಳ ಹಿಂದೆ ಮಾಲೂರು ಖಾಸಗಿ ಶಾಲೆ ಶಿಕ್ಷಕಿಗೆ ಆನ್‌ಲೈನ್ ಮೂಲಕ ವಂಚಿಸಿದ್ದರು. ಅಂಚೆ ಮೂಲಕ Meesho Online PVT Itd. ಲೆಟರ್ ಹೆಡ್ ಇರುವ ಗಿಫ್ಟ್ ಕಾರ್ಡ್ ಕಳುಹಿಸಿ ಮೋಸ ಮಾಡಿದ್ದಾರೆ. ಹೀಗೆ ಮೋಸ ಮಾಡಿ ಹಣ ಗಳಿಸಿ ಅದನ್ನೆಲ್ಲ ಐಷಾರಾಮಿ ಜೀವನಕ್ಕೆ ಖರ್ಚು ಮಾಡಿಕೊಂಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.


