ಬೆಂಗಳೂರು: ವರ್ಗಾವಣೆ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಹೆಚ್ಚಿನ ಒತ್ತು ನೀಡಿ ದಕ್ಷತೆ, ಪಾರದರ್ಶಕತೆ ಕಾಪಾಡಿಕೊಳ್ಳುವ ಜೊತೆಗೆ ಕಮಿಷನ್, ಭ್ರಷ್ಟಾಚಾರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಹೀಗಾಗಿ ತೆರಿಗೆ ಸಂಗ್ರಹಣಾ ಇಲಾಖೆಗಳಲ್ಲಿ ಈ ಕೌನ್ಸೆಲಿಂಗ್ ವರ್ಗಾವಣೆ ನೀತಿ ಜಾರಿಗೊಳಿಸಲು ತೀರ್ಮಾನಿಸಿದೆ.ಸರ್ಕಾರಿ ನೌಕರರ ವರ್ಗಾವಣೆ ನಿರಂತರ ನಡೆಯುವ ಪ್ರಕ್ರಿಯೆ. ಪ್ರತಿವರ್ಷ ಎಲ್ಲಾ ಇಲಾಖೆಗಳಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಈ ಮೂಲಕ ಆಡಳಿತಕ್ಕೆ ಚುರುಕು ನೀಡಲಾಗುತ್ತದೆ. ಆದರೆ, ಈ ವರ್ಗಾವಣೆ ಪ್ರಕ್ರಿಯೆ ದಂಧೆ ರೂಪ ಪಡೆಯುವ ಮೂಲಕ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ವರ್ಗಾವಣೆಗಾಗಿ ಕಮಿಷನ್, ಲಾಬಿ, ಪ್ರಭಾವಿಗಳ ಪ್ರಭಾವ, ಶಾಸಕ – ಸಚಿವರ ಪ್ರಭಾವ, ಲಂಚ ಆರೋಪಗಳಿಂದ ಪ್ರತಿ ಸರ್ಕಾರಗಳು ಸುದ್ದಿಗೆ ಗ್ರಾಸವಾಗುತ್ತಲೇ ಇರುತ್ತವೆ.
ಈ ವರ್ಗಾವಣೆ ಪ್ರಕ್ರಿಯೆ ಪ್ರತಿ ಸರ್ಕಾರಗಳಿಗೆ ದೊಡ್ಡ ತಲೆನೋವಿನ ವಿಚಾರವಾಗಿದೆ. ವರ್ಗಾವಣೆಯಲ್ಲಿ ಪಾರದರ್ಶಕತೆ, ಸಮತೋಲನ ಕಾಪಾಡಲು ಸಾಧ್ಯವಾಗದೇ ಆಡಳಿತಕ್ಕೆ ನಿರೀಕ್ಷಿತ ದಕ್ಷತೆ, ಚುರುಕು ಮುಟ್ಟಿಸಲು ವಿಫಲವಾಗುತ್ತಿವೆ. ಆಡಳಿತದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದೀಗ ರಾಜ್ಯ ಸರ್ಕಾರ ಇನ್ನಷ್ಟು ಹೆಚ್ಚಿನ ಇಲಾಖೆಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಮುಂದಾಗಿದೆ.
ವರ್ಗಾವಣೆಗೆ ಕೌನ್ಸೆಲಿಂಗ್ :
ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ 5 ಇಲಾಖೆಗಳಾದ ವಾಣಿಜ್ಯ ಇಲಾಖೆ, ಅಬಕಾರಿ, ನೋಂದಣಿ ಹಾಗೂ ಮುದ್ರಾಂಕ ಇಲಾಖೆ, ಸಾರಿಗೆ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯಲ್ಲಿ ದಕ್ಷತೆ, ಕಾರ್ಯಕ್ಷಮತೆ, ಆಡಳಿತದಲ್ಲಿ ಚುರುಕು ಮುಟ್ಟಿಸುವುದು ಅತಿ ಮುಖ್ಯವಾಗಿದೆ. ಜೊತೆಗೆ ಭ್ರಷ್ಟಾಚಾರಗಳನ್ನು ನಿಯಂತ್ರಿಸಿ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಅನುಕೂಲವಾಗಲಿದೆ.
ಇದರಿಂದ ಬಜೆಟ್ ಗುರಿಯಂತೆ ಹೆಚ್ಚಿನ ಆದಾಯ ಸಂಗ್ರಹಿಸಲು ಸಹಕಾರಿಯಾಗಲಿದೆ. ಹೀಗಾಗಿ ಪ್ರಮುಖ ತೆರಿಗೆ ಸಂಗ್ರಹಿಸುವ ಈ ಐದು ಇಲಾಖೆಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಪೂರಕ ನೀತಿ ರೂಪಿಸಲು ಮುಂದಾಗಿದೆ.
ನಿಯಮಗಳ ಸರಳೀಕರಣ:
ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗಳ ‘ಬಿ’ ಮತ್ತು ‘ಸಿ’ ವೃಂದಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ವಿವಿಧ ನಿಯಮಗಳ ಸರಳೀಕರಣದ ಮೂಲಕ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಯೋಜಿಸಲಾಗಿದೆ. ಆ ಮೂಲಕ ಬೆಂಗಳೂರಲ್ಲೇ ಬಹಳ ವರ್ಷಗಳಿಂದ ನೆಲೆಯೂರಿರುವ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ದಕ್ಷತೆ ಹೆಚ್ಚಿಸಲಾಗುವುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಹೊಸ ನೀತಿ:
ಈಗಾಗಲೇ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಿಸಿವೆ. ಇದೀಗ ತೆರಿಗೆ ಸಂಗ್ರಹಣಾ ಇಲಾಖೆಗಳಲ್ಲೂ ಕಟ್ಟುನಿಟ್ಟಾಗಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಈ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ಶಾಸಕರ, ಸಚಿವರ, ಪ್ರಭಾವಿಗಳ ಪ್ರಭಾವ ನಡೆಯುವುದಿಲ್ಲ. ನೇರವಾಗಿ ಸಿಬ್ಬಂದಿಗೆ ಕೌನ್ಸೆಲಿಂಗ್ ಮಾಡಿ ವರ್ಗಾವಣೆ ಮಾಡಲಾಗುತ್ತದೆ.
ಈ ಕೌನ್ಸೆಲಿಂಗ್ ವರ್ಗಾವಣೆ ನೀತಿಯಲ್ಲಿ ಸಿಬ್ಬಂದಿ ಅರ್ಜಿ ಸಲ್ಲಿಸಬೇಕು. ತಮ್ಮ ಆದ್ಯತೆಯ ಸ್ಥಳಗಳನ್ನು ಆಯ್ಕೆ ಮಾಡುವ ಅವಕಾಶ ಇರಲಿದೆ. ವರ್ಗಾವಣೆಗಾಗಿ ಸಿಬ್ಬಂದಿಗೆ ಒಂದು ನಿರ್ದಿಷ್ಟ ಕಾಲ ಮಿತಿ ನಿಗದಿಗೊಳಿಸಲಾಗುತ್ತದೆ. ಒಂದೇ ಸ್ಥಳದಲ್ಲಿ ಮೂರು ಅಥವಾ ಐದು ವರ್ಷ (ನಿಗದಿ ಪಡಿಸಿದಂತೆ) ಪೂರೈಸಿದ ಸಿಬ್ಬಂದಿಗೆ ವರ್ಗಾವಣೆ ಪ್ರಕ್ರಿಯೆಗೊಳಗಾಗುತ್ತಾರೆ. ತಾವು ಸಲ್ಲಿಸಿದ ಅರ್ಜಿ, ಸ್ಥಳದ ಆಯ್ಕೆಗಳನ್ನು ಪರಿಗಣಿಸಿ ಆನ್ ಲೈನ್ ಅಥವಾ ನೇರವಾಗಿ ಕೌನ್ಸೆಲಿಂಗ್ ನಡೆಸಿ ಸಕಾಲದಲ್ಲಿ ವರ್ಗಾವಣೆ ಮಾಡಲಾಗುತ್ತದೆ.
ವರ್ಗಾವಣೆ ನೀತಿ ಅನುವು:
ಒಬ್ಬ ಅಧಿಕಾರಿ ಒಂದೇ ಹುದ್ದೆಯಲ್ಲಿ ದೀರ್ಘಕಾಲ ಮುಂದುವರಿಯಲು ಈ ಕೌನ್ಸೆಲಿಂಗ್ ವರ್ಗಾವಣೆ ನೀತಿ ತಡೆಯುತ್ತದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಹಳ ವರ್ಷಗಳಿಂದ ಇರುವ ಅಧಿಕಾರಿಗಳನ್ನು ಇತರೆ ಜಿಲ್ಲೆಗಳಿಗೆ ವರ್ಗಾಯಿಸಲು ಈ ವರ್ಗಾವಣೆ ನೀತಿ ಅನುವು ಮಾಡಿಕೊಡಲಿದೆ. ಕೌನ್ಸೆಲಿಂಗ್ ವರ್ಗಾವಣೆ ನೀತಿಯಡಿ ವರ್ಗಾವಣೆ ಕಡ್ಡಾಯವಾಗಿರಲಿದೆ. ಆಯಾ ಇಲಾಖೆಗಳು ತಮ್ಮ ಆಡಳಿತ ಸುಧಾರಣೆ ಅನುಗುಣವಾಗಿ ಕೌನ್ಸೆಲಿಂಗ್ ವರ್ಗಾವಣೆ ಮಾನದಂಡ ರೂಪಿಸಲಿದೆ.
ಇಲಾಖೆಗಳಲ್ಲಿ ಕೌನ್ಸೆಲಿಂಗ್:
ಸದ್ಯ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ವರ್ಗಾವಣೆ ನೀತಿ ಜಾರಿಗೊಳಿಸಲಾಗಿದೆ. ಶಿಕ್ಷಕರ ವರ್ಗಾವಣೆಯನ್ನು ಹಲವು ವರ್ಷಗಳಿಂದ ಕೌನ್ಸೆಲಿಂಗ್ ಮೂಲಕವೇ ನಡೆಸಲಾಗುತ್ತಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಉಪ ನೋಂದಣಾಧಿಕಾರಿಗಳ ವರ್ಗಾವಣೆಯಲ್ಲೂ ಈ ವರ್ಷದಿಂದ ಕೌನ್ಸೆಲಿಂಗ್ ಜಾರಿಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲೂ ಕೆಲವು ವೃಂದದ ಸಿಬ್ಬಂದಿಯ ವರ್ಗಾವಣೆ ಆನ್‌ಲೈನ್ ಮೂಲಕ ನಡೆಯುತ್ತಿದೆ.
ಅದೇ ಮಾದರಿಯಲ್ಲಿ ಅಬಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ಪದ್ಧತಿ ಅಳವಡಿಸಲು ಅಬಕಾರಿ ಇಲಾಖೆ ಈಗಾಗಲೇ ಕರಡು ನಿಯಮ ರೂಪಿಸಿದ್ದು, ಅಧಿಕೃತ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ. ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್‌ಗಳು, ಅಬಕಾರಿ ಸಬ್ ಇನ್‌ಸ್ಪೆಕ್ಟರ್‌ಗಳು, ಕಚೇರಿ ಅಧೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಹಿರಿಯ ಮತ್ತು ಕಿರಿಯ ಕಾನ್‌ಸ್ಟೆಬಲ್‌ಗಳು, ವಾಹನ ಚಾಲಕರು ಸೇರಿದಂತೆ ‘ಸಿ’ ವೃಂದದಲ್ಲಿರುವ ಎಲ್ಲ ಅಧಿಕಾರಿಗಳು, ಸಿಬ್ಬಂದಿಯ ವರ್ಗಾವಣೆಗೆ ಕೌನ್ಸೆಲಿಂಗ್ ಅಳವಡಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ನಾಗರಿಕ ಸೇವೆಗಳು (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು 2025 ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದೆ.
ಇನ್ನು ಜುಲೈ 2024ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಉಪ ನೋಂದಣಾಧಿಕಾರಿ, ಹಿರಿಯ ನೋಂದಣಾಧಿಕಾರಿಗಳ ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಇಲಾಖೆಯ ಪ್ರಥಮ ದರ್ಜೆ ಸಹಾಯಕರ ವರ್ಗಾವಣೆಯೂ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕರು ಪ್ರತಿರೋಧ:
ತಮ್ಮ ಹಸ್ತಕ್ಷೇಪ ಮೊಟಕುಗೊಳುವ ಹಿನ್ನೆಲೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನೀತಿಗೆ ಶಾಸಕರು, ಅಧಿಕಾರಿ ವರ್ಗದವರು ತೀವ್ರ ಪ್ರತಿರೋಧ ತೋರುತ್ತಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ)ಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾಯಿಸುವುದಕ್ಕೆ ಎಲ್ಲ ಶಾಸಕರು ವಿರೋಧಿಸುತ್ತಿದ್ದಾರೆ. ಇತ್ತ ಅರಣ್ಯ ಇಲಾಖೆಯಲ್ಲೂ ಹೊಸ ವರ್ಗಾವಣೆ ನಿಯಮ ವಿರೋಧಿಸಿ ಸುಮಾರು 40ಕ್ಕೂ ಅಧಿಕ ಶಾಸಕರು ಸಿಎಂ ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು.
ನೋಂದಣೆ ಹಾಗೂ ಮುಂದ್ರಾಂಕ ಇಲಾಖೆಯಲ್ಲಿ ಉಪ ನೋಂದಣಿ ಅಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಿರುವುದಕ್ಕೂ ತೀವ್ರ ವಿರೋಧ ವ್ಯಕ್ತವಾಗಿದೆ. ಸಬ್ ರಿಜಿಸ್ಟ್ರಾರ್ಗಳು ಈ ಸಂಬಂಧ ನ್ಯಾಯಾಲಯದ ಕದ ತಟ್ಟಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದಾರೆ. ವರ್ಗಾವಣೆ ಗೊಂದಲ ಹಿನ್ನೆಲೆ ಕಂದಾಯ ಭವನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಐದು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ನೋಂದಾಣಿ ಅಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿ ಸದ್ಯ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.