ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಚಿವ ಸ್ಥಾನದಲ್ಲಿಯೇ ಒಬ್ಬೊಬ್ಬರಾಗಿಯೇ ಮುಂದಿನ ದಿನಗಳಲ್ಲಿ ಬಾಯಿ ಬಿಡುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಶಾಸಕರಾದ ಬಿ.ಆರ್.ಪಾಟೀಲ್ ಮತ್ತು ರಾಜು ಕಾಗೆ ಆರೋಪಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್.ಪಾಟೀಲ್ ಅವರು ಮನೆಗಳನ್ನು ಕೊಡುವ ಸಮಯದಲ್ಲಿ ದುಡ್ಡು ಕೊಡದೇ, ಲಂಚ ಕೊಡದೇ ಏನು ಕೆಲಸ ಆಗುವುದಿಲ್ಲ ಎಂದು ಗುರುತರದ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕರೆದರೆ ವಾಸ್ತವದ ಸ್ಥಿತಿ ಹೇಳುವುದಾಗಿ ಹೇಳಿದ್ದಾರೆ. ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕೇವಲ ರಾಜು ಕಾಗೆ ಮಾತ್ರವಲ್ಲ, ಹೀಗೆ ಹತ್ತಾರು ಜನರು ಈ ರೀತಿ ಹೇಳುತ್ತಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡುತ್ತಾರೆ. ನೀವೇ ಕಾದು ನೋಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.