ರಾಜ್ಯದ ನ್ಯಾಯಮೂರ್ತಿಗಳೇ 63 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ಹೇಳಿದ್ದಾರೆ. ಆದ್ದರಿಂದ ಭ್ರಷ್ಟಾಚಾರದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಆಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, 63 ಪರ್ಸೆಂಟ್ ಕಮಿಶನ್, ಮೊದಲಾದ ಆರೋಪಗಳು ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿ ಕೊಡಿ ಎಂದು ಕೇಳಿದ್ದರು. ಯಾವುದೇ ರಾಜ್ಯದ ಚುನಾವಣೆ ನಡೆದರೂ ಕರ್ನಾಟಕ ಎಟಿಎಂ ಆಗಿರುತ್ತದೆ. ಬಿಹಾರ ಚುನಾವಣೆಗೆ ಸುಮಾರು 300 ಕೋಟಿ ರೂ. ವರ್ಗಾವಣೆಯಾಗಿದೆ. ಪೇಸಿಎಂ ಎಂಬ ಭಿತ್ತಿಪತ್ರವನ್ನು ಕಾಂಗ್ರೆಸ್ ನಾಯಕರ ಮುಖದ ಮೇಲೆ ಅಂಟಿಸಬೇಕು. ಇಂತಹ ಸಮಯ ದಲ್ಲೇ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಕರ್ನಾಟಕದ ಭ್ರಷ್ಟಾಚಾರದ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ನ್ಯಾಯಮೂರ್ತಿಗಳೇ ಸಾಕ್ಷಿಯಾಗಿದ್ದಾರೆ. ಆದ್ದರಿಂದ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾ ಚಾರದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯಮೂರ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಭೋವಿ ನಿಗಮದಲ್ಲಿ ಒಂದು ಎಕರೆ ಉಳುಮೆ ನೀಡಲು 25 ಲಕ್ಷ ರೂ. ಕಮಿಶನ್ ಇದೆ. ಬಾರ್ ಲೆಸೆನ್ಸ್‌ಗೆ 20 ಲಕ್ಷ ರೂ. ಕಮಿಶನ್ ಇದೆ. ಟ್ರಾನ್ಸ್‌ಫಾರ್ಮರ್ ಅಳವಡಿಕೆಯಲ್ಲಿ 90 ಕೋಟಿ ರೂ. ಹಗರಣ ನಡೆದಿದೆ. ಕಸದ ಯಂತ್ರ ಖರೀದಿಯಲ್ಲಿ ಎರಡೂವರೆ ಕೋಟಿ ರೂ. ಹಗರಣ ನಡೆಯುತ್ತಿದೆ ಎಂದು ದೂರಿದರು.
ವಿರೋಧ ಪಕ್ಷಗಳಿಗೆ ಹೆದರಿ ಕಾಂಗ್ರೆಸ್ ಸಭೆ ನಡೆಸಿ ಶಾಸಕರನ್ನು ತಯಾರಿ ಮಾಡಿದೆ. ರೈತರಿಗೆ ಮಾಡಿದ ಅನ್ಯಾಯ, ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯದ ಬಗ್ಗೆ ಸದನದಲ್ಲಿ ಮಾತನಾಡುತ್ತೇವೆ. ಪ್ರವಾಹ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮೊದಲ ದಿನವೇ ಚರ್ಚೆಯಾಗಲೇಬೇಕು. ಮುಖ್ಯಮಂತ್ರಿಗಳೇ ಕಳ್ಳತನ ಮಾಡುತ್ತಿದ್ದಾರೆ, ಹಾಗಾಗಿ ಪೊಲೀಸರು ಕೂಡ ದರೋಡೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪೊಲೀಸರು ಹಣ ಸಂಗ್ರಹ ಮಾಡಬೇಕಿರುವುದರಿಂದ ಅಪರಾಧಿ ಚಟುವಟಿಕೆಗಳಲ್ಲಿ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಚೋರಿ ಚೋರಿ ಎಂದು ಕೂಗುತ್ತಾರೆ. ಅವರು ಕರ್ನಾಟಕಕ್ಕೆ ಬಂದರೆ ಇಲ್ಲಿಯೇ ಚೋರಿ ಮಾಡುವುದು ಕಾಣುತ್ತದೆ ಎಂದರು.
ಇಬ್ಬರ ಅಧಿಕಾರದ ಜಗಳದ ನಡುವೆ ಡಾ.ಜಿ.ಪರಮೇಶ್ವರ್ ಕೂಡ ಸಿಎಂ ಸ್ಥಾನಕ್ಕೆ ಪೈಪೋಟಿ ಮಾಡುತ್ತಿದ್ದಾರೆ ಎಂದು ಹೇಳಿದರು.


