ನವದೆಹಲಿ: ದೇಶದ ಎಲ್ಲಾ ಗ್ರಾಹಕರಿಗೆ ಅನ್ವಯವಾಗುವಂತೆ ಎಲ್ ಜಿಪಿ ಅಡುಗೆ ಅನಿಲ ದರ 50 ರೂ. ಏರಿಕೆಯಾಗಿದೆ.
ಕೇಂದ್ರ ತೈಲ ಸಚಿವ ಹರ್ದಿಪ್ ಸಿಂಗ್ ಪುರಿ ಸೋಮವಾರ ಸಬ್ಸಿಡಿ ಆಧಾರಿತ ಉಜ್ವಲ ಹಾಗೂ ಸಾಮಾನ್ಯ ಗ್ರಾಹಕರು ಬಳಸುವ ಗ್ಯಾಸ್ ಸಿಲಿಂಡರ್ ದರ ಏರಿಕೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
50 ರೂ. ಗ್ಯಾಸ್ ಸಿಲಿಂಡರ್ ದರ ಏರಿಕೆಯಿಂದ 14 ಕೆಜಿ ತೂಕದ ಸಾಮಾನ್ಯ ಗ್ಯಾಸ್ ಸಿಲಿಂಡರ್ ದರ 800 ರೂ.ನಿಂದ 850 ರೂ.ಗೆ ಏರಿಕೆಯಾದರೆ, ಉಜ್ವಲ ಯೋಜನೆಯಡಿ ಪಡೆಯುತ್ತಿದ್ದ ಸಿಲಿಂಡರ್ ದರ 500 ರೂ.ನಿಂದ 550 ರೂ.ಗೆ ಏರಿಕೆಯಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ 41 ರೂ. ಇಳಿಕೆ ಮಾಡಲಾಗಿತ್ತು. ಇದೀಗ ಸಾಮಾನ್ಯ ಜನರು ಬಳಸುವ ಗ್ಯಾಸ್ ಸಿಲಿಂಡರ್ ದರದಲ್ಲೂ ಏರಿಕೆ ಮಾಡುವ ಮೂಲಕ ಗ್ರಾಹಕರ ಮೇಲೆ ಕೇಂದ್ರ ಬರೆ ಎಳೆದಿದೆ.
ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಲೀಟರ್ ಗೆ 2 ರೂ. ಅಬಕಾರಿ ಸುಂಕ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಗ್ಯಾಸ್ ಸಿಲಿಂಡರ್ ದರವನ್ನೂ ಏರಿಕೆ ಮಾಡಿದೆ. ಇದರಿಂದ ದೇಶದಲ್ಲಿ ಹಣದುಬ್ಬರ ಜೊತೆಗೆ ಅಗತ್ಯ ವಸ್ತುಗಳ ದರ ಏರಿಕೆ ಆಗಲಿವೆ.