ಬೆಂಗಳೂರು: ಅಡುಗೆ ಅನಿಲ ಸೋರಿಕೆಯಿಂದ ಆದ ಸ್ಫೋಟದಲ್ಲಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಪೀಣ್ಯ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಅವಘಡ ಸಂಭವಿಸಿದ್ದು, ಬಿಹಾರ ಮೂಲದ ಅಂಶುರಾಜ್ ಕುಮಾರ್ (18), ಹುಸೇನ್ ಖಾನ್ (21), ರೋಹಿತ್ ಚೌದರಿ (20), ಆರಬೇಗ್ ಆಲಂ (26) ಹಾಗೂ ಮುಜಾಫರ್ ಹುಸೇನ್ (19) ಎಂಬ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅವಘಡ:
ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಐವರೂ ಚೊಕ್ಕಸಂದ್ರದಲ್ಲಿ ಒಂದೇ ರೂಮ್‌ನಲ್ಲಿ ವಾಸವಿದ್ದರು. ರೂಮ್‌ನಲ್ಲಿದ್ದ ಸಿಲಿಂಡರ್‌ನಿಂದ ಅಡುಗೆ ಅನಿಲ ಸೋರಿಕೆ ಆಗಿರುವುದನ್ನು ಅರಿಯದೆ ಶುಕ್ರವಾರ ಬೆಳಿಗ್ಗೆ ಟೀ ಕಾಯಿಸಲು ಲೈಟರ್ ಹೊತ್ತಿಸಿದಾಗ ಅಗ್ನಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಸ್ಫೋಟಿಸಿ ಟೆಕ್ಕಿ ಸಾವು
ಪಿ.ಜಿಯೊಂದರ ಅಡುಗೆ ಕೋಣೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಟೆಕ್ಕಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಡಿಸೆಂಬರ್ 29ರಂದು ಸಂಜೆ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿತ್ತು. ಬ್ರೂಕ್‌ಫೀಲ್ಡ್ ರಸ್ತೆಯಲ್ಲಿರುವ ಸೆವೆನ್ ಹಿಲ್ಸ್ ಶ್ರೀ ಸಾಯಿ ಕೋ-ಲಿವಿಂಗ್ ಪಿ.ಜಿಯಲ್ಲಿ ಸಂಭವಿಸಿದ ಅವಘಡದಲ್ಲಿ ಬಳ್ಳಾರಿ ಮೂಲದ ಅರವಿಂದ್ (23) ಎಂಬಾತ ಮೃತಪಟ್ಟಿದ್ದ.ವೆಂಕಟೇಶ್, ವಿಶಾಲ್ ವರ್ಮಾ, ಸಿ.ವಿ.ಗೋಯಲ್ ಎಂಬ ಮಹಿಳೆ ಗಾಯಗೊಂಡಿದ್ದರು.


