ನ್ಯೂಯಾರ್ಕ್: ಇತರ ದೇಶಗಳಿಗೆ ಅಮೆರಿಕದ ನೆರವು ನಿಲ್ಲಿಸಿರುವ ಅಧ್ಯಕ್ಷ ಟ್ರಂಪ್, ಇದೀಗ, ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (ಯುಎಸ್ ಏಡ್) ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.
ಯುಎಸ್‌ಏಡ್ ವೆಬ್ಸೈಟಲ್ಲಿ 2 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ. ಸಿಬ್ಬಂದಿಗೆ ಬಲವಂತದ ರಜೆ: ಇದರ ಜೊತೆಗೆ, ಪ್ರಪಂಚದಾದ್ಯಂತ ಇರುವ ಸಂಸ್ಥೆಯ ಕೆಲ ಉದ್ಯೋಗಿಗಳನ್ನು ಹೊರತುಪಡಿಸಿ, ಸಾವಿರಾರು ಸಿಬ್ಬಂದಿಗೆ ಬಲವಂತದ ರಜೆ ನೀಡಲಾಗಿದೆ.
ಉದ್ಯೋಗಿಗಳ ವಜಾಕ್ಕೆ ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಿಬ್ಬಂದಿ ವಜಾ ತಡೆಗೆ ಕೋರ್ಟ್ ನಿರಾಕರಣೆ: ಯುಎಸ್ ಏಡ್ ಸಿಬ್ಬಂದಿಯನ್ನು ಸರ್ಕಾರ ವಜಾ ಮಾಡುತ್ತಿರುವುದರ ವಿರುದ್ಧ ತಡೆಯಾಜ್ಞೆ ನೀಡಬೇಕು ಎಂದು ಕೋರಿ ನೌಕರರ ಒಕ್ಕೂಟ ಫೆಡರಲ್ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ, ಇದನ್ನು ನ್ಯಾಯಾಧೀಶೆ ಕಾರ್ಲಾ ನಿಕೋಲ್ಸ್ ನಿರಾಕರಿಸಿದ್ದಾರೆ.
ಅನಗತ್ಯ ಸರ್ಕಾರಿ ವೆಚ್ಚ ಕಡಿಮೆ ಮಾಡಲು ಟ್ರಂಪ್ ಸಲಹೆಗಾರ ಮಸ್ಕ್ ನೇತೃತ್ವದ ಸಮಿತಿಯು ಈಗಾಗಲೇ ಹಲವಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇತ್ತೀಚಿನ ನಿರ್ಧಾರವು ಉಳಿದ ಉದ್ಯೋಗಿಗಳಲ್ಲಿ ಭೀತಿಯನ್ನು ಉಂಟುಮಾಡುತ್ತಿದೆ. ಯುಎಸ್ ಏಡ್ ಸಂಸ್ಥೆಯು ವ್ಯರ್ಥ ವೆಚ್ಚದಾಯಕ ಮತ್ತು ಅದೊಂದು ಕ್ರಿಮಿನಲ್ ಸಂಸ್ಥೆ ಜರಿದಿದ್ದಾರೆ.
ಭಾರತದಲ್ಲಿ ’ಚುನಾವಣಾ ವ್ಯವಸ್ಥೆ ಸುಧಾರಣೆ’ಗೆ ಅನುದಾನ: ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಏಡ್)ಯು ಭಾರತದಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆಗೆ ಅನುದಾನ ನೀಡುತ್ತಿತ್ತು ಎಂದು ಹೇಳಲಾಗಿದೆ.
ಅಮೆರಿಕ ಸರ್ಕಾರವು ಯುಎಸ್ ಏಡ್ ಮೂಲಕ 182 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದು ಭಾರತದಲ್ಲಿ ಬಿರುಗಾಳಿ ಎಬ್ಬಿಸಿದೆ.
ಅಮೆರಿಕದ ವಸ್ತುಗಳಿಗೆ ಅತಿ ಹೆಚ್ಚು ಸುಂಕ ವಿಧಿಸುವ ದೇಶಗಳಲ್ಲಿ ಒಂದಾದ, ಆರ್ಥಿಕವಾಗಿ ಸಶಕ್ತವಾಗಿರುವ ಭಾರತಕ್ಕೆ ನಾವೇಕೆ ಅನುದಾನ ನೀಡಬೇಕು ಎಂದು ಪ್ರಶ್ನಿಸಿರುವ ಟ್ರಂಪ್ ಸರ್ಕಾರ ಯುಎಸ್ ಏಡ್ನಿಂದ ನೀಡಲಾಗುತ್ತಿದ್ದ ನೆರವನ್ನು ನಿಲ್ಲಿಸುವುದಾಗಿ ಘೋಷಿಸಿದೆ.
ಅಮೆರಿಕದ ನೆರವು ಪಡೆದು ಭಾರತದಲ್ಲಿ ನರೇಂದ್ರ ಮೋದಿ ಹೊರತಾದ ಸರ್ಕಾರವನ್ನು ರಚಿಸಲು ಸಂಚು ರೂಪಿಸಲಾಗಿತ್ತು ಎಂದು ಟ್ರಂಪ್ ಆರೋಪಿಸಿದ್ದರು. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಜೊತೆಗೆ ಯಾರೆಲ್ಲಾ ಅಮೆರಿಕದ ಅನುದಾನ ಪಡೆದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲು ಒತ್ತಾಯ ಕೇಳಿಬಂದಿದೆ.