ಬಾಕಿ ಹಣ ಪಾವತಿ ಆಗದೇ ಇರುವುದು ಸೇರಿದಂತೆ ಗುತ್ತಿಗೆದಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಗುತ್ತಿಗೆದಾರರ ಸಂಘವು ಏಳು ಸಚಿವರಿಗೆ ಪತ್ರ ಬರೆದಿದೆ.
ಅಧಿಕಾರಿಗಳು ಹಾಗೂ ಸಚಿವರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್ ಸಿ ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಎನ್ ಎಸ್ ಬೋಸರಾಜು, ದಿನೇಶ್ ಗುಂಡೂರಾವ್ ಮತ್ತು ರಹೀಂ ಖಾನ್ ಅವರ ವಿರುದ್ಧ ಗುತ್ತಿಗೆದಾರರ ಸಂಘ ಆಕ್ರೋಶ ಹೊರ ಹಾಕಿದೆ.
ಸರ್ಕಾರದಿಂದ ಗುತ್ತಿಗೆದಾರರಿಗೆ ಸಾಕಷ್ಟು ಹಣ ಪಾವತಿ ಬಾಕಿ ಇದೆ. ಇಲಾಖೆಯ ಅಧಿಕಾರಿಗಳ ಬಳಿ ಬಾಕಿ ಕೇಳಿದರೆ ಸಚಿವರನ್ನು ಭೇಟಿಯಾಗಿ ಎನ್ನುತ್ತಾರೆ. ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಂಘ ಹೇಳಿದೆ.
ಏಳು ದಿನದೊಳಗೆ ಗುತ್ತಿಗೆದಾರರ ಸಭೆ ಕರೆದು ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗುತ್ತದೆ. ಸರ್ಕಾರದಿಂದ ಗುತ್ತಿಗೆದಾರರಿಗೆ 32 ಸಾವಿರ ಕೋಟಿ ರುಪಾಯಿ ಹಣ ಪಾವತಿ ಬಾಕಿ ಇದೆ. ಬೃಹತ್ ನೀರಾವರಿ ಇಲಾಖೆಯೊಂದರಿಂದಲೇ 14,000 ಕೋಟಿ ರೂ.ಗೂ ಅಧಿಕ ಹಣ ಬಾಕಿ ಇದೆ, ಕಮಿಷನ್ ಕೊಟ್ಟರೆ ಮಾತ್ರ ಗುತ್ತಿಗೆ ನೀಡುವ ಕೆಲಸ ಆಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದೆ.