ಬೆಂಗಳೂರು: ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ವಿಶ್ರಾಂತಿ ಅವಧಿ ಮುಗಿಸಿದ ಮೇಲೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕಣ್ಣಿಟ್ಟಿದ್ದಾರೆ ಎಂದು ಕೇಳಿದಾಗ, ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ ಎಂದರು.
ಪಕ್ಷದ ನಾಯಕರು, ಮುಖಂಡರ ಬಳಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಕೆಲವೊಂದು ವಿಚಾರಗಳಲ್ಲಿ ಅವರ ಮಾತುಗಳಿಗೂ ನಾವು ಗೌರವ ನೀಡಬೇಕಾಗುತ್ತದೆ. ಎಲ್ಲರ ಸಲಹೆ ಸೂಚನೆ ಮೇರೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದರು.
ಚನ್ನಪಟ್ಟಣ ಉಪಚುನಾವಣೆಗೆ ಒಪ್ಪದ ನೀವು ಈಗ ನಿರ್ದೇಶಕ ಸ್ಥಾನಕ್ಕೆ ಒಪ್ಪಿರುವುದು ಕುತೂಹಲಕ್ಕೆ ಕಾರಣವಾಗಿ ಎಂದು ಕೇಳಿದಾಗ, “ಜಿಲ್ಲೆಯ ಶಾಸಕರು, ಮಾಜಿ ನಿರ್ದೇಶಕರು, ಅಧ್ಯಕ್ಷರುಗಳು, ಅನೇಕ ಜಿಲ್ಲೆಯ ನಾಯಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ನಾನು ಅವರ ಮಾತುಗಳಿಗೆ ಪಕ್ಷದ ಕಾರ್ಯಕರ್ತನಾಗಿ ತಲೆಬಾಗಬೇಕಾಗುತ್ತದೆ. ಹಿರಿಯರ ಮಾತುಗಳನ್ನು ಸ್ವೀಕಾರ ಮಾಡಿದ್ದೇನೆ, ಕಾದು ನೋಡೋಣ. ನಿಮ್ಮ ವಿರುದ್ಧ ಅಭ್ಯರ್ಥಿ ಹಾಕುವ ಬಗ್ಗೆ ರಾಮನಗರದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದು ತಿಳಿಸಿದರು.
ಅಶೋಕ್ ಅವರಿಗೆ ಯೋಗ್ಯತೆ, ಅರ್ಹತೆ ಇದೆ
ಬಿಡದಿ ಟೌನ್ ಶಿಪ್ ಕುರಿತು ಆರ್.ಅಶೋಕ್ ಸೇರಿದಂತೆ ಅನೇಕರಿಂದ ನಿಮ್ಮ ಮೇಲೆ ಭೂಕಬಳಿಕೆ ಆರೋಪದ ಕುರಿತು ಕೇಳಿದಾಗ, “ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಅವರಿಗೆ ಎಲ್ಲಾ ಮಾಹಿತಿಯನ್ನು ಪಡೆಯಲು ಯೋಗ್ಯತೆ ಮತ್ತು ಅರ್ಹತೆಯಿದೆ. ಒಂದು ವೇಳೆ ಇಲ್ಲ ಎಂದರೆ ನಾನು ಅವರಿಗೆ ಮಾಹಿತಿ ನೀಡುತ್ತೇನೆ. ಕಬಳಿಕೆ ಕುರಿತು ನಾನು ಮಾತನಾಡಬೇಕು ಎಂದರೆ ಉತ್ತರಹಳ್ಳಿಯ ಬಗ್ಗೆ ಮಾತನಾಡಬೇಕಾಗುತ್ತದೆ” ಎಂದರು.
ಕುಮಾರಸ್ವಾಮಿ ಆಶಯದಂತೆ ನಮ್ಮ ಕೆಲಸ
ರೈತರ ವಿರೋಧದ ಬಗ್ಗೆ ಕೇಳಿದಾಗ, “ನಾವು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಈ ಹಿಂದೆ ಕುಮಾರಸ್ವಾಮಿ ಅವರು ಮಾಡಿದ್ದನ್ನು ಮುಂದುವರೆಸಲಾಗಿದೆ. ಕುಮಾರಸ್ವಾಮಿ ಅವರ ಆಶಯದಂತೆ ಉಪನಗರಗಳು ರಚನೆಯಾಗಬೇಕು ಎಂದು ಅವರದೇ ಸರ್ಕಾರದ ಅವಧಿಯಲ್ಲಿ ತೀರ್ಮಾನವಾಗಿತ್ತು. ಅದನ್ನು ನಾವು ಮುಂದುವರೆಸುತ್ತಿದ್ದೇವೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ನಮ್ಮ ಪಕ್ಷದ ಉದ್ದೇಶ ಕೂಡ ಇದಾಗಿದೆ. ಉಪಮುಖ್ಯಮಂತ್ರಿಯವರು ಆ ಭಾಗದ ರೈತರಿಗೆ ಖಂಡಿತವಾಗಿ ನ್ಯಾಯ ಒದಗಿಸಿಕೊಡುತ್ತಾರೆ. ಇದು ನಮ್ಮ ಜವಾಬ್ದಾರಿ ಕೂಡ” ಎಂದು ಹೇಳಿದರು.