Menu

ಬೆಂಗಳೂರು ದಕ್ಷಿಣದಲ್ಲಿ 80 ಎಕರೆ ಸರ್ಕಾರಿ ಜಮೀನು ಮಠಮಾನ್ಯಗಳಿಗೆ ನೀಡಲು ಪರಿಶೀಲನೆ

ಬೆಂಗಳೂರು ದಕ್ಷಿಣ ತಾಲೂಕಿನ ವ್ಯಾಪ್ತಿಯಲ್ಲಿ 80 ಎಕರೆ ಸರ್ಕಾರಿ ಜಮೀನನ್ನು ವಿವಿಧ ಸಮಾಜದ ಮಠಮಾನ್ಯಗಳಿಗೆ ಹಂಚುವ ಬಗ್ಗೆ ಸರ್ಕಾರ ಪರಿಶೀಲಿಸಿದೆ. ವಿವಿಧ ಸಮಾಜದ ಸ್ವಾಮೀಜಿಗಳು ಕೋರಿದಂತೆ ಸಮಾಜದ ಅಭಿವೃದ್ಧಿಗೆ ಅನುದಾನವನ್ನು ನೀಡಲು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕುರುಬ ಸಮಾಜಕ್ಕಾಗಿ ಮೈಸೂರಿನಲ್ಲಿ ಯಾಂದಳ್ಳಿ ಗ್ರಾಮದಲ್ಲಿ 12 ಎಕರೆ ಜಾಗ ನೀಡಲಾಗಿದ್ದು, ಭವನ ನಿರ್ಮಾಣ ಪೂರ್ಣಗೊಳಿಸಲಾಗುವುದು, ಬೆಂಗಳೂರಿನ ಬನಶಂಕರಿಯಲ್ಲಿ ಕಾನೂನು ಕಾಲೇಜು ಮತ್ತು ಯುಪಿಎಸ್ ಸಿ ತರಬೇತಿಗಾಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕುರುಬರ ಸಂಘದ ನೂತನ ಕಟ್ಟಡ ನಿರ್ಮಾಣವನ್ನು 34 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೈಸೂರು ಜಿಲ್ಲೆಯಲ್ಲಿ 300 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಮತ್ತು ಯುಪಿಎಸ್ ಸಿ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಶ್ರೀ ಕಾಗಿನೆಲೆ ಗುರುಪೀಠದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.

ತಾವರೆಕೆರೆ ಬಳಿಯ ಕೆತೋಹಳ್ಳಿ ಜಗದ್ಗುರು ಶ್ರೀ ಬಿರೇಂದ್ರ ಕೇಶದ ತಾರಕಾನಂದಪುರಿ ಮಹಾಸ್ವಾಮಿಗಳ 19ನೇ ವರ್ಷದ ಪುಣ್ಯರಾಧನೆಯ ಸ್ಮರಣಾರ್ಥ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ, ಬೆಂಗಳೂರು ಭಕ್ತರ ಭಂಡಾರ ಕುಟೀರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ಸಮಾಜದ ಬಂಧುಗಳು ಶಿಕ್ಷಣದಿಂದ ವಂಚಿತರಾಗದೆ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕಿ ಎಂದು ಕರೆ ನೀಡಿದರು.

ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. 10 ಕೋಟಿ ರೂ.ಬೆಲೆಬಾಳುವ ಒಂದು ಎಕರೆ ಜಾಗವನ್ನು ಮಹೇಶ್ ಕೊಟ್ಟಿದ್ದು ಶ್ಲಾಘನೀಯ. ಅವರಿಗೆ ಎಲ್ಲರ ಪರವಾಗಿ ಧನ್ಯವಾದ ಎಂದರು. ಜನರಲ್ಲಿ ಜಾಗೃತಿ ಮೂಡಿಸಲು ಮಠದ ಅಗತ್ಯವಿದೆ. ಶಿಕ್ಷಣ, ಆರೋಗ್ಯ, ಸಂಘಟನೆ ಸಾಧ್ಯವಾಗುತ್ತಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಜಾತೀಯತೆ ವಾಸ್ತವವಾಗಿದ್ದು, ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಶೋಷಿತ ವರ್ಗದ ಜನರು ಜಾತಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. ಶೋಷಿತ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ. ವಿದ್ಯೆಯಿಂದ ಸ್ವಾಭಿಮಾನ ಬೆಳೆದು ಮನುಷ್ಯರಾಗಲು ಸಾಧ್ಯ. ಇಲ್ಲದಿದ್ದರೆ ಗುಲಾಮಗಿರಿ ನಮ್ಮಲ್ಲಿ ಮನೆಮಾಡುತ್ತದೆ. ಸಮುದಾಯವನ್ನು ಬೆಳೆಸಿ ಇತರರನ್ನು ಬೆಳೆಸಿ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *