Saturday, December 06, 2025
Menu

ಕಾಂಗ್ರೆಸ್ ಪಕ್ಷದಿಂದ ಡಾ. ಅಂಬೇಡ್ಕರರ ಬಗ್ಗೆ ಮೊಸಳೆಕಣ್ಣೀರು: ಬಿ.ವೈ.ವಿಜಯೇಂದ್ರ

vijayenrda

ಬೆಂಗಳೂರು: ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಗತ್ತೇ ಮೆಚ್ಚುವಂಥ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ನೀಡುವ ಪುಣ್ಯ ಕಾರ್ಯ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪುμÁ್ಪರ್ಚನೆ ನೆರವೇರಿಸಿ ಅವರು ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಸಮಾಜದ ನಿರ್ಮಾಣದ ಕನಸು, ಅವರ ಆದರ್ಶಗಳನ್ನು ದೇಶಾದ್ಯಂತ ಪಾಲಿಸುವ ಅನಿವಾರ್ಯತೆ ಇದೆ ಎಂದು ನುಡಿದರು.

ಸಂವಿಧಾನದ ಮೂಲಕ ಹಕ್ಕುಗಳ ರಕ್ಷಣೆಯ ಪುಣ್ಯದ ಕೆಲಸ ಅವರ ನೇತೃತ್ವದಲ್ಲಿ ಆಗಿದೆ. ನವೆಂಬರ್ 26 ಅನ್ನು ನಮ್ಮ ಪ್ರಧಾನಿಯವರು ಸಂವಿಧಾನ ದಿನವಾಗಿ ಘೋಷಿಸಿದ್ದು ಮಾತ್ರವಲ್ಲದೇ, ಬಾಬಾ ಸಾಹೇಬರಿಗೆ ಗೌರವ ಕೊಡುವ ಕೆಲಸವು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರದಿಂದ ಆಗಿದೆ ಎಂದು ವಿವರಿಸಿದರು.

ಬಾಬಾಸಾಹೇಬ ಅಂಬೇಡ್ಕರರಿಗೆ ಭಾರತರತ್ನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿತ್ತು. ಚುನಾವಣೆಗೆ ನಿಂತಾಗ ಅವರನ್ನು ಸೋಲಿಸುವ ಷಡ್ಯಂತ್ರ ಕಾಂಗ್ರೆಸ್ ಪಕ್ಷದಿಂದ ಆಗಿತ್ತೆಂದು ವಿವರಿಸಿದರು. ಇಷ್ಟಾದರೂ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ಒಂದು ರೀತಿ ಸಂವಿಧಾನವಿರೋಧಿ ಎಂದು ಟೀಕಿಸುತ್ತಿದೆ. ಅವರ ಹುಳುಕು ಮುಚ್ಚಿ ಹಾಕುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದೆ ಎಂದು ಆಕ್ಷೇಪಿಸಿದರು.

ಅಂಬೇಡ್ಕರರಿಗೆ ಸೇರಿದ ಕ್ಷೇತ್ರಗಳನ್ನು ಪಂಚತೀರ್ಥವಾಗಿ ಅಭಿವೃದ್ಧಿ

ಕೇಂದ್ರದಲ್ಲಿ ಎನ್‍ಡಿಎ ಸರಕಾರ ಬಂದ ಬಳಿಕ ಮೋದಿಯವರು ಪ್ರಧಾನಿಗಳಾದ ನಂತರ ಅಂಬೇಡ್ಕರರಿಗೆ ಸೇರಿದ ಕ್ಷೇತ್ರಗಳನ್ನು ಪಂಚ ತೀರ್ಥವಾಗಿ ಮಾಡಿ ಅಭಿವೃದ್ಧಿ ಮಾಡಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಜನ್ಮಸ್ಥಳ, ಲಂಡನ್‍ನಲ್ಲಿ ವಿದ್ಯಾಭ್ಯಾಸದ ವೇಳೆ ತಂಗಿದ್ದ ಮನೆಯನ್ನು ಸ್ಮಾರಕವನ್ನಾಗಿ ಮಾಡಿದ್ದಾರೆ. ನಾಗಪುರದ ದೀಕ್ಷಾ ಸ್ಥಳ, ದೆಹಲಿಯ ಸ್ಮಾರಕ ಮಾಡಿದ್ದಾರೆ. ಚೈತನ್ಯಭೂಮಿ ಅಭಿವೃದ್ಧಿ ಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ ಮಾಡಿಲ್ಲ. ಬಿಜೆಪಿ-ಎನ್‍ಡಿಎ ಸರಕಾರದಿಂದ ಇದೆಲ್ಲವೂ ಆಗಿದೆ ಎಂದರು.

ಕಾಂಗ್ರೆಸ್ ಪಕ್ಷವು ಡಾ. ಅಂಬೇಡ್ಕರರ ಬಗ್ಗೆ ಮೊಸಳೆಕಣ್ಣೀರು ಸುರಿಸುತ್ತಿದೆ. ಇದನ್ನು ದೇಶ ಮತ್ತು ರಾಜ್ಯದಲ್ಲಿ ಸಾರಿ ಸಾರಿ ಹೇಳಬೇಕೆಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಬಡವರ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಅವರು ಯಾವತ್ತೂ ಅಂಬೇಡ್ಕರರ ಚಿಂತನೆಗಳನ್ನು ವಿರೋಧಿಸುತ್ತ ಬಂದಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕೂ ಗೌರವ ನೀಡದ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.
ವಾಸ್ತವಿಕ ಸತ್ಯವನ್ನು ರಾಜ್ಯ- ದೇಶದ ಜನರ ಮುಂದೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅಂಬೇಡ್ಕರರ ಆದರ್ಶಗಳನ್ನು ನಾವು ರೂಢಿಸಿಕೊಳ್ಳಬೇಕಿದೆ. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಕೊಟ್ಟ ಪವಿತ್ರ ಸಂವಿಧಾನಕ್ಕೆ ಅಗೌರವ ಆಗದಂತೆ ಸಂವಿಧಾನದ ರಕ್ಷಣೆ ಮಾಡುವ ಕೆಲಸವೂ ನಾವು- ನೀವು ಮಾಡುವ ಮೂಲಕ ಬಾಬಾಸಾಹೇಬರಿಗೆ ಗೌರವ ಕೊಡಬೇಕೆಂದು ಮನವಿ ಮಾಡಿದರು.

ಸಂಸದ ಮತ್ತು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮೀ ಅಶ್ವಿನ್ ಗೌಡ, ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಎಸ್‍ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಮಾಜಿ ಸದಸ್ಯ ಡಾ. ವೆಂಕಟೇಶ್ ಮೌರ್ಯ, ಎಸ್‍ಸಿ ಮೋರ್ಚಾ ಮತ್ತು ಎಸ್‍ಟಿ ಮೋರ್ಚಾ ರಾಜ್ಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *