ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಂತೆ ಸಂವಿಧಾನ ರಕ್ಷಣೆಗಾಗಿ ಪ್ರತಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷದ ಅಡ್ವೋಕೇಟ್ ಬ್ಯಾಂಕ್ (ವಕೀಲರ ಸಮಿತಿ) ರಚಿಸಬೇಕು. ಆ ಮೂಲಕ ಪ್ರತಿ ಕ್ಷೇತ್ರದ ಮತದಾರರ ಹಕ್ಕು ಹಾಗೂ ಕಾರ್ಯಕರ್ತರ ರಕ್ಷಣೆ ಮಾಡಬೇಕು ಎಂದು ಡಿಸಿಎಂ ಡಿಕೆ. ಶಿವಕುಮಾರ್ ಹೇಳಿದ್ದಾರೆ. ಎಐಸಿಸಿ ಕಾನೂನು, ಮಾನವೀಯ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗವು ನವದೆಹಲಿಯಲ್ಲಿ ಆಯೋಜಿಸಿದ್ದ ‘ಸಾಂವಿಧಾನಿಕ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಶಿವಕುಮಾರ್ ಮಾತನಾಡಿದರು.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಈ ದೇಶಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವುದು ಸಂವಿಧಾನ. ನಾವು ಸಂವಿಧಾನ ಹಾಗೂ ಅದರ ಆಶಯಗಳನ್ನು ರಕ್ಷಿಸಿಕೊಳ್ಳಬೇಕು. ನಾವು ಪಂಡಿತ್ ಜವಾಹರ್ ಲಾಲ್ ನೆಹರು, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಮೌಲಾನಾ ಅಜಾದ್, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಅವರ ಆದರ್ಶವನ್ನು ಪಾಲಿಸುತ್ತಿದ್ದೇವೆ. ಇಂದು ರಾಹುಲ್ ಗಾಂಧಿ ಅವರು ತಮ್ಮ ಸಹೋದರಿಯನ್ನು ನೋಡುತ್ತಾ, “ನಾವು ಈ ದೇಶಕ್ಕಾಗಿ ಒಂದಲ್ಲಾ ಒಂದು ದಿನ ಬೆಂಕಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರಲಿದೆ. ಈ ದೇಶಕ್ಕಾಗಿ ನಾವು ಇಂದಿನಿಂದಲೇ ಬೆಂಕಿಯಲ್ಲಿ ನಿಲ್ಲೋಣ” ಎಂಬ ಸಂದೇಶವನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಆಗಸ್ಟ್ 5ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯನದಲ್ಲಿ ಈ ಹೋರಾಟ ಆರಂಭಿಸಲಿದ್ದಾರೆ. ಈ ದೇಶದಲ್ಲಿ ಇಂತಹ ಬದ್ಧತೆ ತೋರಿಸಿರುವ ಬೇರೊಬ್ಬ ನಾಯಕರನ್ನು ತೋರಿಸಿ ನೋಡೋಣ ಎಂದು ತಿಳಿಸಿದರು.
ಕಾಂಗ್ರೆಸ್ ಇತಿಹಾಸ, ಈ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ಈ ಈ ದೇಶದ ಶಕ್ತಿ. ಗಾಂಧಿ ಕುಟುಂಬ ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸಿದ್ದು, ಕಾಂಗ್ರೆಸ್ ಪಕ್ಷ ಇಡೀ ದೇಶವನ್ನು ಒಗ್ಗಟ್ಟಾಗಿಟ್ಟಿದೆ. ಈ ಕಾಂಗ್ರೆಸ್ ಇಲ್ಲದಿದ್ದರೆ ದೇಶ ಇಷ್ಟು ಹೊತ್ತಿಗೆ ಹಲವು ಭಾಗಗಳಾಗಿ ವಿಭಜನೆಯಾಗುತ್ತಿತ್ತು.ನನ್ನನ್ನು ಅಭಿಷೇಕ್ ದತ್ ಅವರು ಯುವಕ ಎಂದು ಪರಿಚಯಿಸಿದರು. ನನಗೆ ಈಗಾಗಲೇ 63 ವರ್ಷವಾಗಿದೆ. ನಾನು ಕೊನೆಯ ವರ್ಷದ ಪದವಿ ಓದುವಾಗ ರಾಜೀವ್ ಗಾಂಧಿ ಅವರು ನನಗೆ ಚುನಾವಣಾ ಟಿಕೆಟ್ ಅನ್ನು ನೀಡಿದರು. ಕಳೆದ 37 ವರ್ಷಗಳಿಂದ ನಾನು ವಿಧಾನಸಭೆಯಲ್ಲಿ ಇದ್ದೇನೆ. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸುವುದಿಲ್ಲ ಎಂಬ ಧ್ಯೇಯವನ್ನು ಮನಗಂಡಿದ್ದೇನೆ ಎಂದರು.
ನನ್ನನ್ನು ತಿಹಾರ್ ಜೈಲಿಗೆ ಹಾಕಿದ ಸಂದರ್ಭದಲ್ಲಿ ಅಭಿಷೇಕ್ ಸಿಂಗ್ವಿ, ಕಪಿಲ್ ಸಿಬಲ್ ಹಾಗೂ ರೊಹಟಗಿ ಅವರ ವಕೀಲರ ತಂಡ ನನ್ನ ಪರ ನಿಂತು ನನ್ನನ್ನು ಜೈಲಿನಿಂದ ಹೊರ ತಂದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನನ್ನು ಜೈಲಿಗೆ ಹಾಕಿದ್ದಾರೆ ಎಂದು ಸೋನಿಯಾ ಗಾಂಧಿ ಅವರು ನನ್ನನ್ನು ನೋಡಲು ತಿಹಾರ್ ಜೈಲಿಗೆ ಬಂದರು. ಪಕ್ಷದ ಕಾರ್ಯಕರ್ತನನ್ನು ಉಳಿಸಲು ಅವರು ತಿಹಾರ್ ಜೈಲಿನ ಮೆಟ್ಟಿಲು ತುಳಿಯಬೇಕಾಯಿತು. ಆವರಿಗೆ ನಾನು ಇಲ್ಲಿಂದಲೇ ನಮಿಸುತ್ತೇನೆ. ತದನಂತರ ಅವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ತದನಂತರ ಮೂರು ವರ್ಷಗಳ ಕಾಲ ನಿರಂತರವಾಗಿ ಹಗಲಿರುಳು ನಿದ್ದೆಗೆಟ್ಟಿ ಪಕ್ಷವನ್ನು ಸಂಘಟಿಸಿ ಡಬಲ್ ಇಂಜಿನ ಸರ್ಕಾರವನ್ನು ಮಣಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಾಗಿದೆ ಎಂದು ಹೇಳಿದರು.
ರಾಹುಲ್ ಅವರನ್ನು ಪ್ರಧಾನಿ ಮಾಡುವುದಕ್ಕೆ ಶ್ರಮಿಸಬೇಕು
ನಮಗೆಲ್ಲಾ ಈ ಅವಕಾಶ ನೀಡಿರುವ ಅಭಿಷೇಕ್ ಸಿಂಗ್ವಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಜತೆಗೂಡುವುದು ಆರಂಭ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ ಎನ್ನುವ ಮಾತನ್ನು ನಾನು ಪದೇ ಪದೇ ಹೇಳುತ್ತಿರುತ್ತೇನೆ. ನಾವು ಇಂದಿನಿಂದಲೇ ನಮ್ಮ ತನು ಮನವನ್ನು ಪಕ್ಷಕ್ಕಾಗಿ ಅರ್ಪಿಸಿದರೆ 2029ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬಹುದು. ನಮ್ಮ ಪಕ್ಷದ ಅನೇಕ ನಾಯಕರು ವಕೀಲರಲ್ಲ. ಆದರೆ ಅವರ ಅನುಭವ ಈ ದೇಶದ ಅನೇಕ ಕಾನೂನು ರೂಪಿಸಿದೆ. ನಾವು ಮತ್ತೆ ಸಂವಿಧಾನ ರಕ್ಷಣೆಗಾಗಿ ಅಧಿಕಾರಕ್ಕೆ ಬರಬೇಕಿದೆ. ನಮ್ಮ ಪೀಳಿಗೆ, ಯುವಕರು ಈ ದೇಶದ ಸಂವಿಧಾನ ರಕ್ಷಣೆಯನ್ನು ಎದುರು ನೋಡುತ್ತಿದ್ದಾರೆ. ನಾನು ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಆರಂಭಿಸಿದೆ. ಆರಂಭಿಕ ದಿನಗಳಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದೆ.ಆ ಕಾಲದಲ್ಲಿ ನಮ್ಮ ಪಕ್ಷದ ನಾಯಕರು ನಮಗೆ ಪ್ರೋತ್ಸಾಹ ನೀಡಿದರು. ನಾವು ಸರಿಯಾದ ಅಜೆಂಡಾ ಇಟ್ಟುಕೊಂಡು ಬದ್ಧತೆಯಿಂದ ಶ್ರಮಿಸಿ, 2029ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಗಾಂಧಿ ಕುಟುಂಬದ ತ್ಯಾಗ ಮರೆಯಲಾಗದು
ಈ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿರುವ ನಾಯಕರು ಅಥವಾ ಕುಟುಂಬ ಯಾವುದಾದರೂ ಇದ್ದರೆ ಅದು ಈ ಗಾಂಧಿ ಕುಟುಂಬ. ದೇಶದ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿದಾಗ, ಅವರು ನನಗೆ ಅಧಿಕಾರ ಸಿಗುವುದು ಮುಖ್ಯವಲ್ಲ, ಈ ದೇಶದ ಅತ್ಯುತ್ತಮ ಆರ್ಥಿಕ ತಜ್ಞ, ಅಲ್ಪಸಂಖ್ಯಾತ ಸಿಖ್ ಸಮುದಾಯದ ನಾಯಕ ಪ್ರಧಾನಮಂತ್ರಿಯಾಗಬೇಕು ಎಂದರು. ನಾವು ಪಂಚಾಯ್ತಿ ಹುದ್ದೆಯಿಂದ ಶಾಸಕ, ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ಧವಿರುವುದಿಲ್ಲ. ಆದರೆ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದರು. ಇಂತಹ ತ್ಯಾಗ ಬೇರೆ ಯಾರಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಕಾಲಿಟ್ಟ ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚಿಸಿದ್ದೇವೆ
ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕಿದರು. ಕರ್ನಾಟಕದಲ್ಲಿ 24 ದಿನಗಳ ಕಾಲ ಪಾದಯಾತ್ರೆ ಮಾಡಿದರು. ಅವರು ಹೆಜ್ಜೆ ಇಟ್ಟ ಕ್ಷೇತ್ರಗಳಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಗೆದ್ದು, ಕರ್ನಾಟಕದಲ್ಲಿ ಸರ್ಕಾರ ರಚಿಸಿದೆ. ಇದು ಅವರು ಕೊಟ್ಟಿರುವ ಶಕ್ತಿ. ರಾಹುಲ್ ಗಾಂಧಿ ಅವರು ನೀಡಿರುವ ಸಂದೇಶದಂತೆ ಪಕ್ಷದ ಕಾನೂನು ಘಟಕ ಪ್ರತಿ ಕ್ಷೇತ್ರ ಮಟ್ಟದವರೆಗೆ ರಚನೆಯಾಗಬೇಕು. ಪ್ರತಿ ಬೂತ್ ನಲ್ಲಿ ಮತದಾರರ ಪಟ್ಟಿ ಪರಿಶೀಲನೆ ಆಗಬೇಕು. ಪ್ರತಿ ಕಾರ್ಯಕರ್ತರು, ಎಲ್ಲಾ ಸಮುದಾಯಗಳನ್ನು ನಾವು ರಕ್ಷಣೆ ಮಾಡಬೇಕು. ಆಗ ಮಾತ್ರ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಕರೆ ನೀಡಿದರು.
ಕಳೆದ ವರ್ಷ ಡಿಸೆಂಬರ್ 26 ರಂದು, ನಾವು ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶತಮಾನೋತ್ಸವವನ್ನು ಆಚರಣೆ ಮಾಡಿದೆವು. ಅದೇ ದಿನ ನಾವು ನಮ್ಮ ನಾಯಕ ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡೆವು. ಈ ಕಾರ್ಯಕ್ರಮದ ಮೂಲಕ ನಾವು ಜೈ ಭೀಮ್, ಜೈ ಬಾಪು, ಜೈ ಸಂವಿಧಾನ ಎಂಬ ಸಂದೇಶ ನೀಡಿದೆವು. ಇದು ನಮ್ಮ ದೇಶಕ್ಕೆ ಕೊಟ್ಟ ಸಂದೇಶ ಎಂದರು.
ಸಂವಿಧಾನ ನಮ್ಮ ಜೀವನದ ಮೂಲಮಂತ್ರ ಎಂದು ನಂಬಿದ್ದೇವೆ. ಏಕತೆ, ಸಮಗ್ರತೆ ಹಾಗೂ ಸಮಾನತೆ ಸಂವಿಧಾನದ ಮೂಲ ಆಶಯ. ಆದರೆ ಇಂದು ಈ ಆಶಯಗಳನ್ನು ದಮನ ಮಾಡಲಾ ಗುತ್ತಿದೆ. ಸಂವಿಧಾನವನ್ನು ಹತ್ತಿಕ್ಕಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಈ ಷಡ್ಯಂತ್ರವನ್ನು ಮೆಟ್ಟಿ ನಿಂತು ಇವುಗಳ ರಕ್ಷಣೆಗೆ ನಾವು ಶ್ರಮಿಸಬೇಕು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯ ಕರ್ತನಾಗಿ, ಇಂದು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗನದಂತೆ ನಾವು ಮುಂದೆ ಸಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ಕೊಟ್ಟ ಪಕ್ಷದ ಕಾರ್ಯಕರ್ತನಾಗಿರುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದು ತಿಳಿಸಿದರು.