ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ 100 ರಿಂದ 125 ದಿನಕ್ಕೆ ಕೂಲಿ ದಿನ ಹೆಚ್ಚಳ ಮಾಡಿದ್ದಾರೆ. ಇದರಿಂದ ಕೂಲಿಕಾರಿಗೆ ಅನುಕೂಲ ಆಗಲಿದೆ. ಈ ಯೋಜನೆಯಲ್ಲಿ ಪ್ರತಿ ಮನೆಯಲ್ಲಿ ಕೆಲಸ ಇರುವವರು, ಇಲ್ಲದವರ ಪಟ್ಟಿ ಮಾಡುವುದು, ಅಭಿವೃದ್ಧಿ ಯೋಜನೆ ರೂಪಿಸುವುದು, ಅನುಷ್ಠಾನಗೊಳಿಸುವುದು, ಕಾರ್ಮಿಕರಿಗೆ ಕೂಲಿ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗಳಿಗೆ ಇದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಜಿ ರಾಮ್ ಜಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ ಅಂತ ಹೇಳುತ್ತಾರೆ. ವಿಬಿ ಜಿ ರಾಮ್ ಜಿ ವಿಧೆಯಕದ ಕ್ಲಾಸ್ 16 ರಲ್ಲಿ ಗ್ರಾಮ ಪಂಚಾಯತಿಗೆ ಎಲ್ಲಾ ಮನೆಯಲ್ಲಿ ಕೆಲಸ ಇದೆಯಾ ಇಲ್ವಾ ಅಂತ ನೋಡುವ ಹಕ್ಕಿದೆ. ಗ್ರಾಮದ ಅಭಿವೃದ್ದಿ ಯೋಜನೆ ರೂಪಿಸುವ ಹಕ್ಕು, ಯೋಜನೆ ಅನುಷ್ಠಾನ ಮಾಡುವ ಅಧಿಕಾರ, ಎಲ್ಲಾ ದಾಖಲೆ ಮಾಡುವ ಅಧಿಕಾರ, ಕೂಲಿ ಕೊಡುವ ಅಧಿಕಾರ ಅವರಿಗೆ ಇದೆ. ಯಾಕೆ ಕಾಂಗ್ರೆಸ್ ನವರು ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಅಕ್ರಮಕ್ಕೆ ತಡೆ
ವಿಕಸಿತ ಭಾರತ ಎಂದರೆ ಗ್ರಾಮ ರಾಜ್ಯ ರಾಮರಾಜ್ಯ ಆಗಲಿ ಅಂತ ಯೋಜನೆ ಮಾಡಿದ್ದಾರೆ. ಈ ಯೋಜನೆಯಲ್ಲಿ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ಕರ್ನಾಟಕದಲ್ಲಿ ಸುಮಾರು 30 ಸಾವಿರ ಸ್ಕೂಲ್ ರೂಮ್ ಕಟ್ಟಲು ಅವಕಾಶ ಇದೆ. ನಮ್ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹ್ವಾನ್ ಅವರು, ಇವತ್ತಿನ ಅಗತ್ಯಕ್ಕೆ ತಕ್ಕಂತೆ ಯೋಜನೆ ಮಾಡಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆಧಾರ ಸೀಡಿಂಗ್, ಡಿಜಿಟಲೈಜೇಷನ್ ಮಾಡಿದ್ದಾರೆ.
ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿ ಹಿಂದಿನ ಸಿಎಂ ವೀರೇಂದ್ರ ಪಾಟೀಲ್ ಅವರ ಹೆಸರಿನಲ್ಲಿ ಕೂಲಿ ಪಡೆದಿದ್ದರು. ಕಾಲಿನ ಹೆಬ್ಬಟ್ಟಿನಿಂದ ಸಹಿ ಮಾಡಿದ್ದರು. ಈ ಯೋಜನೆ ಅನಿಷ್ಠಾನದಲ್ಲಿ ಗುಲಬರ್ಗಾ ಮೊದಲ ಸ್ಥಾನದಲ್ಲಿತ್ತು ಅದನ್ನು ತನಿಖೆ ಮಾಡಿದಾಗ ಅವ್ಯವಹಾರ ಪತ್ತೆಯಾಗಿ ಸಿಬಿಐ ತನಿಖೆ ನಡೆಸಲಾಗಿತ್ತು. ಬೆಳಗಾವಿಯಲ್ಲಿಯೂ ಸಿಬಿಐ ತನಿಖೆ ನಡೆದಿತ್ತು ಎಂದು ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ಇದೆ. ಸಂವಿಧಾನದ 73 ನೇ ತಿದ್ದುಪಡಿಯನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಗಿದೆ. ತಮ್ಮ ಕಳ್ಳತನ ನಿಂತು ಹೊಗುವ ಭಯದಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ. ಸದಸ್ಯರು ಇದನ್ನು ಸರಿಯಾಗಿ ಓದಬೇಕು. ಗ್ರಾಮಿಣ ಜನರಿಗೆ ಹೆಚ್ಚಿನ ಸದಪಯೋಗ ನೀಡಲು ಸಕಾರಾತ್ಮವಾಗಿ ಈ ಯೋಜನೆ ಇದೆ. ಇದನ್ನು ಕಾಂಗ್ರೆಸ್ ಕೊರ್ಟ್ ನಲ್ಲಿ ಚಾಲೆಂಜ್ ಮಾಡಲಿ, ಅವರ ನಿಜ ಬಣ್ಣ ಬಯಲಾಗುತ್ತದೆ. ಅಧಿವೇಶನದಲ್ಲಿ ಯೋಜನೆಯ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಈ ಯೋಜನೆಯಲ್ಲಿ ಗಾಂಧಿಜಿ ಹೆಸರು ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಆಕ್ಷೇಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶೇ 80 ರಷ್ಟು ಯೋಜನೆಗಳು ಜವಾಹರಲಾಲ್ ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಿನಲ್ಲಿವೆ. ಇದು ಮೊದಲು ಜವಾಹರ ರೋಜಗಾರ ಯೋಜನೆ ಅಂತ ಇತ್ತು. ಚುನಾವಣೆ ಬಂದಾಗ ಗಾಂಧಿ ಹೆಸರನ್ನು ದುರುಪಯೊಗ ಪಡೆಸಿಕೊಂಡಿದ್ದಾರೆ. ಗಾಂಧಿಯನ್ನು ರಾಮನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಗಾಂಧಿಯಾವಾಗಲು ರಾಮನ ಹೆಸರು ಹೇಳುತ್ತಿದ್ದರು. ಈಗ ಈ ಯೋಜನೆಗೆ ರಾಮನ ಹೆಸರಿಟ್ಟಿರುವುದಕ್ಕೆ ಗಾಂಧಿ ಆತ್ಮ ಖುಷಿಯಾಗಿರುತ್ತದೆ ಎಂದು ಹೇಳಿದರು.
ಕನ್ನಡ ಮಕ್ಕಳ ರಕ್ಷಣೆ ಮಾಡಲಿ
ಕೇರಳ ಸರ್ಕಾರ ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇರಳ ರಾಜ್ಯದ ಆಜ್ಞೆಯಂತೆ ಕರ್ನಾಟಕ ದಲ್ಲಿ ಆಡಳಿತ ನಡೆಯುತ್ತಿದೆ . ಅಲ್ಲಿನ ಸಿಎಂ ಹೇಳಿದ ತಕ್ಷಣ ಇವರು ಓಡೋಡಿ ಕೆಲಸ ಮಾಡುತ್ತಿದ್ದಾರೆ. ಪಕ್ಷಪಾತವನ್ನು ದಾರ್ಷ್ಟ್ಯದಿಂದ ಮಾಡುತ್ತಿದ್ದಾರೆ. ವೇಣುಗೋಪಾಲ ಮೂಗಿಗೆ ನೆಗಡಿಯಾದರೆ ರಾಜ್ಯ ಸರಕಾರ ಸೀನುತ್ತದೆ. ಕಾಸರಗೋಡು ಕರ್ನಾಟಕದ ಭಾಗ ಎಂದು ಈಗಲೂ ನಾವು ಕೋರ್ಟ್ ನಲ್ಲಿ ಹೋರಾಟ ಮಾಡುತ್ತಿದ್ದೇವೆ. ಕನ್ನಡ ಮಕ್ಕಳ ರಕ್ಷಣೆ ಮಾಡುವ ಕೆಲಸ ಸಿಎಂ ಮಾಡಬೇಕು. ವಯನಾಡು ದುರಂತವಾದಾಗ ಹಣ ಕೊಟ್ಡಿದ್ದಾರೆ. ಅವರು ಹೇಳಿದ ತಕ್ಷಣ ಇಲ್ಲಿ ಮನೆ ಕಟ್ಟಿ ಕೊಡುತ್ತಿದ್ದಾರೆ. ಅಲ್ಲಿಯ ಸಿಎಂಗೆ ಹೇಳಿ ನಮ್ಮ ಕನ್ನಡ ಮಕ್ಕಳ ರಕ್ಷಣೆ ಮಾಡುವ ಕೆಲಸ ಸಿಎಂ ಮಾಡಬೇಕು. ಕೇವಲ ಹೇಳಿಕೆ ಕೊಡುವುದಲ್ಲ ಎಂದು ಹೇಳಿದರು.
ಎಚ್ ಎಂ ಟಿ ಕಾರ್ಖಾನೆ ಮುಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಚ್ ಎಂಟಿಯನ್ನು ಹೊಸ ತಂತ್ರಜ್ಣಾನ ಬಳಸಿ ಉಳಿಸಬೆಕು. ಕೆಂದ್ರ ಸರ್ಕಾರ ಮುಂದೆ ಬರಬೇಕು ಎಂದು ಹೇಳಿದರು.


