ಬಾಬಾ ಸಾಹೇಬ್ ಅಂಬೇಡ್ಕರ್ಗೆ ದ್ರೋಹ ಮಾಡಿದ ಕಾಂಗ್ರೆಸ್ ನಾಯಕರು, ಈಗ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು.
ಕಲಬುರ್ಗಿ ಚಲೋ ಹೋರಾಟದಲ್ಲಿ ಮಾತನಾಡಿದ ಅವರು, ಕಲಬುರ್ಗಿಯ ಜನರನ್ನು ಉಳಿಸಬೇಕಾಗಿದೆಯೇ ಹೊರತು, ರಿಪಬ್ಲಿಕ್ ಆಫ್ ಕಲಬುರ್ಗಿ ಅಲ್ಲ. ಯಾರೇ ಬಿಜೆಪಿ ಕಾರ್ಯಕರ್ತರಿಗೂ ಅನ್ಯಾಯವಾದರೂ ಎಲ್ಲರೂ ಇಲ್ಲಿ ಬಂದು ಹೋರಾಟ ಮಾಡುತ್ತೇವೆ. ಇವರೆಲ್ಲ ಬಾಬಾ ಸಾಹೇಬ್ ಅಂಬೇಡ್ಕರರ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಾರೆ. ಸಂವಿಧಾನದ ಯಾವ ಪುಟದಲ್ಲಿ ಈ ರೀತಿ ಅಪಮಾನ ಮಾಡಿ ಎಂದು ಬರೆದಿದ್ದಾರೆ ಎಂದು ತೋರಿಸಲಿ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರು ಆಡಿದ ಮಾತಿನಿಂದ ಅನ್ಯಾಯವಾದರೆ ಕಾನೂನು ಪ್ರಕಾರ ಹೋರಾಟ ಮಾಡಬೇಕಿತ್ತು ಎಂದರು.
ಕಾಂಗ್ರೆಸ್ ಇಡೀ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಅದಕ್ಕೆ ಕಾಂಗ್ರೆಸ್ ನಾಯಕರು ಇಷ್ಟು ಬೆದರಿಕೆ ಹಾಕುತ್ತಿದ್ದಾರೆ. ಇವರು ಅಂಬೇಡ್ಕರ್ ಸಾಕಿದ ಹುಲಿಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅಂಬೇಡ್ಕರ್ ಮೃತಪಟ್ಟಾಗ ಅವರ ಸಮಾಧಿಗೆ ಆರಡಿ ಜಾಗ ನೀಡಲಿಲ್ಲ. ಆಗ ಕಾಂಗ್ರೆಸ್ ನಾಯಕರು ಬೋನಿನಲ್ಲಿದ್ದಾರೆ. ಇವರೆಲ್ಲರೂ ನಕಲಿ ಗಾಂಧಿಗಳ ಕಾಲು ನೆಕ್ಕುತ್ತಿದ್ದರು. ಅಂಬೇಡ್ಕರರಿಗೆ ದ್ರೋಹ ಮಾಡಿದವರು ಈಗ ಸಂವಿಧಾನದ ಪುಸ್ತಕ ಹಿಡಿದಿದ್ದಾರೆ ಎಂದರು.
ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಡಿ.ಕೆ.ಶಿವಕುಮಾರ್ ಎರಡೂವರೆ ಕೋಟಿ ದೇಣಿಗೆ ನೀಡಿದ್ದಾರೆ. ಆದರೆ ಅಂದು ಅಂಬೇಡ್ಕರ್ ಮೃತಪಟ್ಟಾಗ ಕಾಂಗ್ರೆಸ್ ಪಕ್ಷದಿಂದ ಐದು ಸಾವಿರ ರೂಪಾಯಿ ಕೂಡ ನೀಡಲಿಲ್ಲ. 700 ಕೋಟಿ ರೂ. ಆಸ್ತಿಯನ್ನು 50 ಲಕ್ಷ ರೂ. ಕೊಟ್ಟು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಠಾಣೆ ಮಾಡಿಕೊಂಡಿದ್ದಾರೆ. ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ಪೊಲೀಸ್ ಠಾಣೆಗಳನ್ನು ಮುಚ್ಚಿಹಾಕಲಿ ಎಂದರು.
ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿದೆ. ನಮ್ಮನ್ನು ಎದುರಿಸುವ ಧೈರ್ಯ ಕಾಂಗ್ರೆಸ್ಗೆ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರು ನಮ್ಮ ಪಾಕಿಸ್ತಾನ ಎಂದು ಹೇಳುತ್ತಾರೆ. ಆದರೂ ನಾವ್ಯಾರೂ ಖರ್ಗಯವರ ಮನೆಗೆ ಹೋಗಿ ಮುತ್ತಿಗೆ ಹಾಕಿಲ್ಲ. ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೇವಲ ವಿಮಾನ ಹಾರಿಸಿದ್ದು ಎನ್ನುತ್ತಾನೆ. ಮುಂಬೈಯಲ್ಲಿ 175 ಜನರು ಸತ್ತಾಗ ಕಾಂಗ್ರೆಸ್ ಸರ್ಕಾರ ಒಂದು ವಿಮಾನ ಕೂಡ ಹಾರಿಸಲಿಲ್ಲ. ಅಂದು ಕಾಂಗ್ರೆಸ್ ಸರ್ಕಾರ ಮಣ್ಣು ತಿಂದುಕೊಂಡು ಕುಳಿತಿತ್ತು. ಈ ಆಟ ಬಹಳ ದಿನ ನಡೆಯುವುದಿಲ್ಲ. ಜನರೇ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.