ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ. ಅಂತಹ ಪಕ್ಷ ಈಗ ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿಯೇ ಚುನಾವಣಾ ಅಕ್ರಮ ಮಾಡಿದ್ದಾರೆ ಎಂದು ಕೋರ್ಟ್‌ನಲ್ಲಿ ಸಾಬೀತಾಗಿತ್ತು. ರಾಹುಲ್ ಗಾಂಧಿ ಆಗಸ್ಟ್ 5 ಕ್ಕೆ ರಾಜ್ಯಕ್ಕೆ ಬರುವುದೇ ದೊಡ್ಡ ನಾಟಕ. ಇಲ್ಲಿ ಸರ್ಕಾರ ನಡೆಯುತ್ತಿಲ್ಲ. ಅದರ ಬದಲು ಸಿಎಂ ಕುರ್ಚಿಗಾಗಿ ಕಲಹ ನಡೆಯುತ್ತಿದೆ. ಅದನ್ನು ಮರೆಮಾಚಲು ಚುನಾವಣಾ ಅಕ್ರಮದ ವಿಷಯ ಪ್ರಸ್ತಾಪ ಮಾಡಲಾಗಿದೆ ಎಂದರು.
ಚುನಾವಣೆ ನಡೆದಾಗ ನ್ಯಾಯಾಲಯದ ಮೊರೆ ಹೋಗದೆ ಇಷ್ಟು ವರ್ಷವಾದ ಬಳಿಕ ಆರೋಪ ಮಾಡಲಾಗುತ್ತಿದೆ. ಅಭಿವೃದ್ಧಿ ಶೂನ್ಯತೆಯನ್ನು ಮರೆಮಾಚಲು ಈ ರೀತಿ ಮಾಡಲಾಗುತ್ತಿದೆ. ಸಾಕ್ಷಿ ಇದ್ದರೆ ನ್ಯಾಯಾಲಯದ ಮೊರೆ ಹೋಗುತ್ತಿದ್ದರು. ಸಾಕ್ಷಿ ಇಲ್ಲವೆಂದೇ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇಂತಹ ಅಧಿಕಾರಿ ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ತಿಳಿಸಲಿ ಎಂದರು.
ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣ ಸದನದಲ್ಲಿ ಗದ್ದಲ ಸೃಷ್ಟಿಸಿತ್ತು. ಈಗ ಈ ಘಟನೆ ನಡೆದೇ ಇಲ್ಲ ಎಂದು ಕಾಂಗ್ರೆಸ್ ಸರ್ಕಾರ ವರದಿ ನೀಡಿದೆ. ಸಚಿವರ ಮಾತಿಗೆ ಬೆಲೆ ಇಲ್ಲವಾಗಿದೆ. ಸಚಿವರು ಏನೇ ಮಾತಾಡಿದರೂ ಅದು ಸರ್ಕಾರದ ಮಾತಾಗುತ್ತದೆ. ಅಂತಹವರ ಹೇಳಿಕೆಯನ್ನು ವಾಷಿಂಗ್ ಮೆಶಿನ್‌ಗೆ ಹಾಕಿ ಸ್ವಚ್ಛ ಮಾಡಲಾಗಿದೆ. ಪೊಲೀಸರ ಮೇಲೆ ಯಾರ ಒತ್ತಡವಿದೆ ಎಂದು ಗೊತ್ತಾಗಿಲ್ಲ. ಅವ್ಯವಹಾರಗಳನ್ನು ಈ ಸರ್ಕಾರ ಮುಚ್ಚಿಹಾಕುತ್ತದೆ. ಸಚಿವರಿಗೇ ನ್ಯಾಯ ಸಿಕ್ಕಲ್ಲ ಎಂದಾದರೆ ಬಡಜನರ ಪಾಡೇನು ಎಂದು ಪ್ರಶ್ನಿಸಿದರು.
ಡ್ರಗ್ಸ್ ಮಾಫಿಯಾ
ಮೈಸೂರಿನಲ್ಲಿ ಡ್ರಗ್ಸ್ ಮಾಫಿಯಾ ಬೆಳೆದಿದೆ. ಇದಕ್ಕೆ ಸರ್ಕಾರವೇ ಕಾರಣ. ಗೃಹ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇವೆಲ್ಲದರ ಪರಿಣಾಮವಾಗಿ ಇಂತಹ ಘಟನೆ ನಡೆದಿದೆ. ಮಹಾರಾಷ್ಟ್ರದ ಪೊಲೀಸರು ಇಲ್ಲಿಗೆ ಬಂದು ಬಂಧನ ಮಾಡುವುದು ನಮ್ಮ ಪೊಲೀಸರಿಗೆ ಅಪಮಾನವಾಗಿದೆ. ಈ ಹಿಂದೆ ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತವಾದಾಗ ಇಡೀ ಪೊಲೀಸ್ ಇಲಾಖೆಯ ಮೇಲೆ ತಪ್ಪು ಹೊರಿಸಲಾಯಿತು. ಇದರಿಂದಾಗಿ ಪೊಲೀಸರ ನೈತಿಕ ಸ್ಥೈರ್ಯ ಕುಸಿದಿದೆ. ಡ್ರಗ್ಸ್ ಮಾಫಿಯಾವನ್ನು ಎನ್‌ಐಎ ತನಿಖೆಗೆ ನೀಡಲಿ ಎಂದರು.
ಮೈಸೂರಿನ ರಿಂಗ್ ರಸ್ತೆಯಲ್ಲಿ ಪೊಲೀಸರು ಸದಾ ಓಡಾಡುತ್ತಾರೆ. ಆದರೂ ಈ ಘಟನೆ ತಿಳಿದುಬಂದಿಲ್ಲ. ಏಕೆಂದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ ಎಂದರು.
ಪ್ರತಿ ತಿಂಗಳು ರಾಜ್ಯಕ್ಕೆ ಎಷ್ಟು ರಸಗೊಬ್ಬರ ಬಂದಿದೆ? ದಾಸ್ತಾನು ಎಷ್ಟಿದೆ? ಯಾವ ಜಿಲ್ಲೆಯಲ್ಲಿ ಎಷ್ಟು ನಿಗದಿ ಮಾಡಲಾಗಿದೆ? ಎಂಬ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಲಿ. ದಾಸ್ತಾನಿರುವ ರಸಗೊಬ್ಬರವನ್ನು ರೈತರಿಗೆ ತಲುಪಿಸದೆ ಸರ್ಕಾರ ದಲ್ಲಾಳಿಗಳಲ್ಲಿ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ. ಇಷ್ಟು ಸಾಮಾನ್ಯ ಪ್ರಜ್ಞೆ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ರಸಗೊಬ್ಬರ ಕೊಟ್ಟಿದೆ. ಆದರೆ ಅದನ್ನು ರಾಜ್ಯ ಸರ್ಕಾರ ಸರಿಯಾಗಿ ರೈತರಿಗೆ ವಿತರಿಸಿಲ್ಲ. ಮಳೆ ಬರುವುದಕ್ಕೆ ತಕ್ಕಂತೆ ಸರ್ಕಾರ ಸಿದ್ಧವಾಗಿರಬೇಕು. ರಸಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಮುಂಚಿತವಾಗಿ ಸಭೆ ನಡೆಸಲಾಗಿದೆಯೇ? ಈ ಬಗ್ಗೆ ಪೂರ್ವಸಿದ್ಧತೆಯನ್ನು ಮಾಡಿಯೇ ಇಲ್ಲ ಎಂದರು.
ಮಾಲೆಂಗಾವ್ ಸ್ಫೋಟ ಪ್ರಕರಣವನ್ನು ಹಿಂದೂಗಳ ಮೇಲೆ ಹೇರಿ, ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಕಾಂಗ್ರೆಸ್ ಸರ್ಕಾರ ಹುಟ್ಟುಹಾಕಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ಇತರರ ವಿರುದ್ಧ ಎನ್‌ಐಎ ತನಿಖೆ ಮಾಡಲಾಗಿತ್ತು. ಈಗ ಬಂದಿರುವ ತೀರ್ಪಿನಲ್ಲಿ ಎಲ್ಲರೂ ಕಳಂಕರಹಿತರಾಗಿದ್ದಾರೆ. ಹಿಂದೂಗಳನ್ನು ಭಯೋತ್ಪಾದಕರಾಗಿ ಬಿಂಬಿಸಿ ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.