Saturday, November 22, 2025
Menu

ರಾಜ್ಯಕ್ಕೆ ಸಿಎಂ ಯಾರು ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟಪಡಿಸಲಿ: ಆರ್.ಅಶೋಕ

ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ ” ವಂದೇ ಮಾತರಂ ಸಂಭ್ರಮಾಚರಣೆ” ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಯಾರು ಮುಖ್ಯಮಂತ್ರಿ ಎಂದು ಸ್ಪಷ್ಟವಾಗಿ ತಿಳಿಸಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಾದಾಟ ನಡೆಯುತ್ತಿರುವುದರಿಂದ ಸರ್ಕಾರ ಸತ್ತುಹೋಗಿದೆ. ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲವೆಂದರೆ ಸರ್ಕಾರ ನಡೆಯುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಆಡಳಿತಯಂತ್ರ ಕೋಮಾದಲ್ಲಿದೆ ಎಂದರು.

ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಇಲ್ಲ ಎಂದರು.

ಸಿದ್ದರಾಮಯ್ಯನವರನ್ನು ಉಳಿಸಲು ಒಂದು ಗ್ಯಾಂಗ್‌, ಇಳಿಸಲು ಮತ್ತೊಂದು ಗ್ಯಾಂಗ್‌ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕೆಂದು ಒಂದು ತಂಡ, ಆಗಬಾರದೆಂದು ಮತ್ತೊಂದು ತಂಡ ತಂತ್ರ- ಕುತಂತ್ರ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಅಪರಾಧ ಕೃತ್ಯಗಳು ಹೆಚ್ಚಿವೆ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಇಲ್ಲಿ ಯಾರು ಮುಖ್ಯಮಂತ್ರಿ ಎಂದು ತಿಳಿಯುತ್ತಿಲ್ಲ. ರಾಹುಲ್‌ ಗಾಂಧಿ ವೀಕ್‌ ಲೀಡರ್‌ ಆಗಿದ್ದು, ಇಡೀ ರಾಜ್ಯದಲ್ಲಿ ವೀಕ್‌ ನಾಯಕತ್ವ ಎದ್ದು ಕಾಣುತ್ತಿದೆ. ಈ ಗೇಮ್‌ಗಳ ನಡುವೆ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಬಗ್ಗೆ ತನ್ನ ತೀರ್ಮಾನವನ್ನು ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಇಬ್ಬರು ಶಾಸಕರು ಜೈಲಲ್ಲಿದ್ದಾರೆ. ಅವರ ಮತಗಳನ್ನು ಕೇಳಲು ಡಿಕೆಶಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ಪಾಡು ಬಂದಿರುವುದು ಶೋಚನೀಯ.

136 ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷದ ಕಾಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳುವುದಾದರೆ, ನಮ್ಮ ವಿರೋಧ ಪಕ್ಷ ಬಲವಾಗಿದೆ ಎಂದರ್ಥ. ಸರ್ಕಾರಕ್ಕೆ ಅಂಕುಶ ಹಾಕಲು ನಾವಿದ್ದೇವೆ. ನಾವು ಅದನ್ನು ಸಮರ್ಥವಾಗಿ ಮಾಡುತ್ತಿದ್ದೇವೆ ಎಂದರು.

ಡಿ.ಕೆ.ಶಿವಕುಮಾರ್‌ ಒತ್ತಡಕ್ಕೊಳಗಾಗಿ ಮಾತಾಡುತ್ತಿದ್ದಾರೆ. ಸಿದ್ದರಾಮಯ್ಯ ವಚನಭ್ರಷ್ಟರು ಎಂದು ಅವರೇ ಪರೋಕ್ಷವಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ವಚನಭ್ರಷ್ಟ ಎಂಬ ಹಣೆಪಟ್ಟಿ ಸಿಗಲಿದೆ ಎಂದರು.

Related Posts

Leave a Reply

Your email address will not be published. Required fields are marked *