ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಅಧಿಕಾರ ಏನಾದರೂ ಆಗಲಿ, ಯಕ್ಕುಟ್ಟು ಹೋಗಲಿ. ಅಧಿಕಾರದ ಕುರ್ಚಿಗಾಗಿ ಕಿತ್ತಾಡಿಕೊಂಡು ಜನರ ನೆಮ್ಮದಿ ಹಾಳು ಮಾಡುತ್ತಿದ್ದು, ಸಣ್ಣ ಗುಂಡಿಗಳನ್ನು ಮುಚ್ಚಲು ಅವರಿಗೆ ಯೋಗ್ಯತೆಯಿಲ್ಲವೆಂದು ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಕಿಡಿಕಾರಿದರು.
ಕೋಲಾರ ನಗರದ ಹೊರವಲಯದ ಕುಂಬಾರಹಳ್ಳಿ ಗ್ರಾಮದ ಸಂಸದ ಎಂ.ಮಲ್ಲೇಶ್ ಬಾಬು ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮುಖ್ಯಮಂತ್ರಿ ಹಳೆಯ ಸಿದ್ದರಾಮಯ್ಯರೂ ಅಲ್ಲ, ಹೊಸ ಸಿದ್ದರಾಮಯ್ಯರೂ ಅಲ್ಲ. ಅವರದ್ದು ಸದ್ಯಕ್ಕೆ ಏನೂ ಬೇಳೆ ಬೇಯುತ್ತಿಲ್ಲ. ಅದಕ್ಕಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆಂದು ಲೇವಡಿ ಮಾಡಿದರು.
ಸಂಸ್ಕಾರ, ಸಂಸ್ಕೃತಿ ಇಲ್ಲದವರು ದ್ವೇಷ ಭಾಷಣ ನಿಯಂತ್ರಣ ಮಸೂದೆ ಮಂಡನೆ ಮಾಡಿದ್ದಾರೆ. ಯಾರನ್ನೋ ಹೆದರಿಸಲು ಹೋಗಿ ಮುಂದಿನ ದಿನಗಳಲ್ಲಿ ಅವರೇ ಬಲೆಗೆ ಬೀಳಲಿದ್ದು, ಸದ್ಯಕ್ಕೆ ಕಾಂಗ್ರೆಸ್ಸಿನವರ ಪಾಪದ ಕೊಡವೂ ತುಂಬಿದೆ ಎಂದು ಟೀಕಿಸಿದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ನಡೆಸುತ್ತಿದ್ದೇನೆ ಎಂದು ನಾನು ಯಾವಾಗ ಹೇಳಿದ್ದೆ ? ನನ್ನ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಗೋವಿಂದರಾಜ ನಗರದಲ್ಲಿ ಇದ್ದಿದ್ದರೆ ನಾನು ಮತ ಕೇಳದೆಯೇ ಗೆಲ್ಲುತ್ತಿದ್ದೆ. ಪಕ್ಷ ಹೇಳಿದ್ದಕ್ಕಾಗಿಯೇ ನಾನು ಗೋವಿಂದರಾಜ ನಗರ ಬಿಟ್ಟು ಬೇರೆ ಕಡೆ ಸ್ಪರ್ಧಿಸಿದ್ದೆ, ಪುನಃ ತುಮಕೂರಿಗೆ ಕಳುಹಿಸಿದರು, ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿಲ್ಲವೇ. ಹೀಗಾಗಿ ಪಕ್ಷದ ವರಿಷ್ಠರ ತೀರ್ಮಾನ ಮುಖ್ಯವಾಗಿರುತ್ತದೆ. ಬಿಜೆಪಿ ಪಕ್ಷದಲ್ಲಿ ಭಿನ್ನವೂ ಇಲ್ಲ, ಮತವೂ ಇಲ್ಲ. ಜನರ ಒಲವು ಎನ್.ಡಿ.ಎ. ಕಡೆಗೆ ಇದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಅನಿಷ್ಟ ಸರಕಾರ ತೊಲಗಿಸುವ ಕೆಲಸವಾಗಲಿ ಎಂದರು.
ತುಮಕೂರಿನವರು ಎನ್ನುವ ಕಾರಣಕ್ಕಾಗಿ ಡಾ.ಜಿ.ಪರಮೇಶ್ವರ್ ಸಿಎಂ ಆಗಲಿ ಎಂದು ಹೇಳಿದ್ದೆ. ಅವರು ಗೊತ್ತಿಲ್ಲ ಮಿನಿಸ್ಟರ್ ಎಂದು ಟ್ರೋಲ್ ಆಗಿದ್ದಾರೆ. ಸಿಎಂ ವಿಚಾರವಾಗಿ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮುಖ್ಯವಾಗಿರುತ್ತದೆ. ಸದ್ಯ ರೈಲ್ವೇ ದರ ಏರಿಕೆ ೫೦೦ ಕಿಮೀ ಮೇಲ್ಪಟ್ಟ ಪ್ರಯಾಣಕ್ಕೆ ೧೦ರೂ ಏರಿಸಲಾಗಿದೆ. ಬೆಲೆ ಏರಿಕೆ ನೋಡುವುದರ ಜತೆಗೆ ರೈಲ್ವೇ ನಿಲ್ದಾಣಗಳಲ್ಲಿನ ಸೌಕರ್ಯಗಳನ್ನು ನೋಡುವುದು ಸೂಕ್ತ ಎಂದರು.
ದೇಶ ಅಭಿವೃದ್ಧಿಗೆ ಗ್ರಾಮ ಮಟ್ಟದಿಂದ ಅಭಿವೃದ್ಧಿ ಆಗಬೇಕು. ಕೇಂದ್ರದ ಯೋಜನೆಗಳಿಗೆ ಜಮೀನು ಕೊಡಿ ಎಂದರೂ ಅವರು ಕೊಡುತ್ತಿಲ್ಲವೆಂದರೆ ಹೇಗೆ ? ವಾರ್ಷಿಕ ೪ ಲಕ್ಷ ಕೋಟಿ ಬಜೆಟ್ ಅಂತಾರೆ ವರ್ಷಕ್ಕೆ೧೦೦೦ , ೧೫೦೦ ಕೋಟಿ ನೀಡಲು ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.
ನಾನು ಸಚಿವನಾದಾಗ ಸಾಕಷ್ಟು ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದ ಹಳೆಯ ಯೋಜನೆಗಳನ್ನೂ ಕೈಗೆತ್ತಿಕೊಂಡಿದ್ದು, ೨೦೨೭ ರೊಳಗೆ ಮುಗಿಸಲಾಗುವುದು. ರೈಲ್ವೇ ಕೋಚ್ ಫ್ಯಾಕ್ಟರಿ ಕೆ.ಎಚ್.ಮುನಿಯಪ್ಪ ಅವಧಿಯಲ್ಲೂ ಆಗಲಿಲ್ಲ. ಪ್ರಸ್ತಾವನೆಗಳು ಬಾಯಿ ಮಾತಿನಲ್ಲಿದ್ದರೆ ಆಗುವುದಿಲ್ಲ. ಕಡತಗಳಲ್ಲಿ ಕೆಲವಾದರೆ ಅನುಕೂಲವಾಗುವುದು ಎಂದು ಹೇಳಿದರು.
ರೈಲ್ವೇ ಪರೀಕ್ಷೆ ರಾಜ್ಯದ ಆಯಾ ಭಾಷೆಗಳಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ತಮಿಳುನಾಡಿನಲ್ಲಿ ತಾಂತ್ರಿಕ ಸಮಸ್ಯೆಯಾಗಿದ್ದು, ಬೇರೆ ಕಡೆ ಸಮಸ್ಯೆಯಿಲ್ಲ. ಇನ್ನು ಕೃಷ್ಣಾ ನದಿಯಲ್ಲಿ ಕುಡಿಯುವ ನೀರು ಈ ಭಾಗಕ್ಕೆ ತರುವ ಜತೆಗೆ ಅಪ್ಪರ್ ಭದ್ರ ಯೋಜನೆಯ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಕೆಸಿವ್ಯಾಲಿ ನೀರನ್ನು ಅನಿವಾರ್ಯಕ್ಕೆ ತರಲಾಗಿದ್ದು, ಅದಕ್ಕೆ ಪರ್ಯಾಯವಾಗಿ ಕೇಂದ್ರ ಸರಕಾರ ಕ್ರಮಕೈಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಎಂಎಎಲ್ಸಿ ಗೋವಿಂದರಾಜು, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮತ್ತಿರರಿದ್ದರು.


