Menu

ಸಂವಿಧಾನಕ್ಕೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿದ್ದು ಕಾಂಗ್ರೆಸ್‌: ಛಲವಾದಿ ನಾರಾಯಣಸ್ವಾಮಿ

ಸಂವಿಧಾನ ರಕ್ಷಕರೆಂದು ಹೇಳಿಕೊಳ್ಳುವ ಹಾಗೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಕಾಂಗ್ರೆಸ್ ಪಕ್ಷದ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಮಾಡಿದ್ದೇನು? ತುರ್ತು ಪರಿಸ್ಥಿತಿ ಹೇರಿ ಎರಡರಿಂದ ಎರಡೂವರೆ ವರ್ಷ ಸಂವಿಧಾನಕ್ಕೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಇವತ್ತು ತಾವು ಸಂವಿಧಾನ ರಕ್ಷಿಸುವುದಾಗಿ ಭಾಷಣ ಹೊಡೆಯುತ್ತಾರೆ ಎಂದು ಟೀಕಿಸಿದರು. ನೀವು ಹೇಗೆ ರಕ್ಷಿಸುತ್ತೀರಿ? ರಕ್ಷಿಸಲು ಸಂವಿಧಾನ ಎಲ್ಲಿ ತೊಂದರೆಯಲ್ಲಿ ಸಿಲುಕಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರು ರಕ್ಷಣೆ ಮಾಡುವುದಾಗಿ ಹೇಳುತ್ತಾರೋ ಅವರೇ ಭಕ್ಷಕರು. ಕಾಂಗ್ರೆಸ್ಸಿಗೆ ಸರಿಯಾದ ನಿಲುವಿಲ್ಲ ಎಂದು ಟೀಕಿಸಿದರು. ಆ ಪಕ್ಷಕ್ಕೆ ಈ ದೇಶದಲ್ಲಿ ಉಳಿಗಾಲವೂ ಇಲ್ಲ ಎಂದು ನುಡಿದರು.

ಬಿಜೆಪಿ ಕಾರ್ಯಕರ್ತರು ಈಗ ಇಡೀ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಸಿಹಿ ತಿನ್ನುತ್ತಾರೆ. ಕಾಂಗ್ರೆಸ್, ಈ ದೇಶದ ರಕ್ಷಕರೆಂದು ಹಿಂದೆ 400 ಸೀಟು ಗೆದ್ದು ಸಿಹಿ ತಿನ್ನುತ್ತಿದ್ದರು. ಅದು 200 ಸೀಟಿಗೆ ಇಳಿಯಿತು. ಆಮೇಲೆ 100 ಸೀಟು, ಕೊನೆಗೆ 44ಕ್ಕೆ ಬಂದಿತ್ತು. ಈಗ ಬಿಹಾರದಲ್ಲಿ ಆರು ಸೀಟು ಗೆದ್ದಿದ್ದಾರೆ. ಕಳೆದ ಬಾರಿ 4 ಸೀಟು, ಈ ಬಾರಿ ಅದು 6ಕ್ಕೆ ಏರಿದ್ದಾಗಿ ಪಾಪ ಸಿಹಿ ತಿನ್ನುತ್ತಿ ದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ  ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ವಯಸ್ಸಾಗಿದೆ. ಚಿಕಿತ್ಸೆ ಕೊಟ್ಟರೂ ಅದು ಬದುಕುವುದು ಕಷ್ಟ ಎಂದು ತಿಳಿಸಿದರು. ಬಿಜೆಪಿ ಮುಂದೆ ರಾಜ್ಯದ ಚುನಾವಣೆಯಲ್ಲಿ ಗೆಲ್ಲಲಿದೆ. ದೇಶದಲ್ಲೂ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನಿರ್ನಾಮ ಮಾಡಲು ಅಲ್ಲಿನವರೇ ಹುಟ್ಟಿಕೊಂಡಿದ್ದಾರೆ. ಬೇರೆಯವರು ಬೇಕಾಗಿಲ್ಲ ಎಂದು ವಿಶ್ಲೇಷಿಸಿದರು.

ಬಿಜೆಪಿ ಬಂದರೆ ನಿಮಗೆ ಉಳಿಗಾಲವಿಲ್ಲ; ನೀವು ಹುಷಾರಾಗಿರಿ ಎಂದೊಡನೆ ಮುಸಲ್ಮಾನರು ಪಾಪ ಅವರಿಗೆ ಮತ ಹಾಕುತ್ತಾರೆ. ಬಿಜೆಪಿ ಬರದಂತೆ ನೋಡುವುದಷ್ಟೇ ಅವರ ಕೆಲಸ ಎಂದು ತಿಳಿಸಿದರು. ದಲಿತರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ರದ್ದು ಮಾಡುತ್ತಾರೆಂದು ತಿಳಿಸುತ್ತಾರೆ. ಯಾರಾದರೂ ಸಂವಿಧಾನ ತೆಗೆಯಲು ಸಾಧ್ಯವೇ ಎಂದು ಕೇಳಿದರು.

ಇದಕ್ಕೆ ಅಪವಾದ ಎಂಬಂತೆ ದೇಶದ ಕಾಂಗ್ರೆಸ್ ಸ್ಥಾನವನ್ನು (ಎಐಸಿಸಿ) ದಲಿತರಿಗೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಮಾಡಿದ ಸಂಘಟನೆ ಕಾಂಗ್ರೆಸ್ಸನ್ನು ವಿಸರ್ಜಿಸಲು ಮಹಾತ್ಮ ಗಾಂಧಿಯವರು ಸೂಚಿಸಿದ್ದರು. ಈಗ ಮಹಾತ್ಮ ಗಾಂಧಿಯವರ ಮಾತನ್ನು ಉಳಿಸಲು ರಾಹುಲ್ ಗಾಂಧಿಯವರು ಬಂದಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಎಐಸಿಸಿ ಅಧ್ಯಕ್ಷತೆ ಕೊಟ್ಟು, ಕಾಂಗ್ರೆಸ್ ನಾಶ ಆಯಿತೆಂಬ ಕೆಟ್ಟ ಹೆಸರನ್ನು ಖರ್ಗೆಜೀ ಅವರ ಮೇಲೆ ಹಾಕುತ್ತಾರಲ್ಲಾ ಎಂಬುದೇ ನನ್ನ ಆತಂಕ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ಸಿಗೆ ಕೊನೆಯ ಮೊಳೆ ಹೊಡೆಯಬೇಕಿತ್ತು ಎಂದು ತಿಳಿಸಿದರು.

ರಾಜ್ಯದಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಿರಿ, ನಮಗೇನೂ ಚಿಂತೆ ಇಲ್ಲ; ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಒಂದು ಬ್ರೇಕ್‍ಫಾಸ್ಟ್ ಮೂಲಕ ಒಡೆದುಹೋದ ಸಂಬಂಧವನ್ನು ಸರಿಪಡಿಸಲಾಗದು ಎಂದು ತಿಳಿಸಿದರು. ಹಾಳಾದ ಸಂಬಂಧ ಒಂದು ಬ್ರೇಕ್‍ಫಾಸ್ಟ್ ಮೂಲಕ ಸರಿಹೋಗುತ್ತದೆಯೇ ಎಂದು ಕೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆಟಿ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಮುರಳಿ, ಬಿಜೆಪಿ ರೈಚ್ ರೈತ ಮೋರ್ಚಾ ಅಧ್ಯಕ್ಷ ಸಿದ್ದೇಶ ಯಾದವ್, ಬಿಜೆಪಿ ಮುಖಂಡರಾದ ಭಾರ್ಗವಿ ದ್ರಾವಿಡ್ ,  ನಾಗರಾಜ್ ಬೇಂದ್ರೆ ಹಾಗೂ ಇತರರು ಇದ್ದರು.

Related Posts

Leave a Reply

Your email address will not be published. Required fields are marked *