Thursday, January 29, 2026
Menu

ವಿಬಿಜಿ ರಾಮ್‌ಜಿ ಜಾಹೀರಾತಿನಲ್ಲಿ ಗಾಂಧೀಜಿಗೆ ಅಪಮಾನ, ಜನರ ತೆರಿಗೆ ಹಣ ದುರ್ಬಳಕೆ: ಸರ್ಕಾರದ ವಿರುದ್ಧ ಆರ್‌ ಅಶೋಕ ಕಿಡಿ

ವಿಬಿ ಜಿ ರಾಮ್‌ ಜಿ ಯೋಜನೆಗೆ ಸಂಬಂಧಿಸಿದಂತೆ ಮಹಾತ್ಮ ಗಾಂಧೀಜಿ ಹೇಳದೇ ಇರುವುದನ್ನು ಜಾಹೀರಾತಿನಲ್ಲಿ ಸೇರಿಸಿರುವ ಕಾಂಗ್ರೆಸ್‌ ಸರ್ಕಾರ, ಅವರ ಹೆಸರಿನಲ್ಲೇ ಪತ್ರಿಕೆಗಳಲ್ಲಿ ಪ್ರಕಟ ಮಾಡಿಸಿದೆ. ಇದಕ್ಕಾಗಿ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರ ತೆರಿಗೆ ಹಣದಲ್ಲಿ ಪಕ್ಷಕ್ಕೆ ಸಂಬಂಧಿಸಿದ ಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಜಾರಿ ಮಾಡಿದ ವಿಬಿ ಜಿ ರಾಮ್‌ ಜಿ ಯೋಜನೆಯ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧವಾಗಿ ಮಾತಾಡುವ ಅಧಿಕಾರ ಯಾರಿಗೂ ಇಲ್ಲ. ಕಾಯ್ದೆಯ ಚರ್ಚೆಯ ಸಮಯದಲ್ಲಿ ಅದರ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬಹುದು. ಕಾಯ್ದೆ ಜಾರಿಯ ನಂತರ ಅದನ್ನು ಹೀಗೆ ಟೀಕೆ ಮಾಡುವ ನೈತಿಕತೆ ಇರುವುದಿಲ್ಲ. ಇದರಲ್ಲಿ ಮಹಾತ್ಮ ಗಾಂಧೀಜಿಯ ಪಾತ್ರವಿಲ್ಲದಿದ್ದರೂ, ಅವರ ಚಿತ್ರ ಬಳಸಿ ಜಾಹೀರಾತಿನಲ್ಲಿ ಅವರೇ ಮಾತನಾಡುವಂತೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ರಚಿಸಿದ್ದು, ಇನ್ನು ರದ್ದು ಮಾಡಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಇನ್ನು ಮುಂದೆ ಮನೆಹಾಳು ಕಾಂಗ್ರೆಸ್ಸಿಗರು ಬರಲಿದ್ದಾರೆ ಎಂದು ಅವರಿಗೆ ಮೊದಲೇ ಗೊತ್ತಿತ್ತು ಎಂದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಗ್ರೆಸ್‌ ಮುಖಂಡರು ಲೂಟಿ ಮಾಡಿದ್ದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಇದರಲ್ಲಿ ಲೂಟಿ ನಡೆಯುತ್ತಿದೆ ಎಂದು ಹೇಳಿದ್ದರು. ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಕೂಡ ಅದನ್ನೇ ಹೇಳಿದ್ದರು. ಸಾವಿರಾರು ಕೋಟಿ ರೂ. ಬೋಗಸ್‌ ಬಿಲ್‌ ಮಾಡಿ ಲೂಟಿ ಮಾಡಿದ್ದಾರೆ ಎಂದು ಸಿಎಜಿ ವರದಿಯಲ್ಲೂ ಇದೆ. ಇದನ್ನು ತಡೆಯಲು ಪಾರದರ್ಶಕವಾದ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ರಾಹುಲ್‌ ಗಾಂಧಿ ಮಾತು ಕೇಳಿಕೊಂಡು ಜಾಹೀರಾತು ಪ್ರಕಟಿಸಿದೆ. ಜಾಹೀರಾತಿನಲ್ಲಿರುವ ಮಾತುಗಳನ್ನು ಗಾಂಧೀಜಿ ಎಂದೂ ಹೇಳಿಲ್ಲ. ಅದನ್ನು ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮೂಲಕ ಗಾಂಧೀಜಿಗೂ ಅಪಮಾನ ಮಾಡಲಾಗಿದೆ ಎಂದು ದೂರಿದರು.

ಮಹಾತ್ಮ ಗಾಂಧೀಜಿ ಹೇಳದೇ ಇರುವುದನ್ನು ಪ್ರಕಟ ಮಾಡಿದರೆ ಅದು ದೊಡ್ಡ ತಪ್ಪು. ಗಾಂಧೀಜಿ ಚಿತ್ರ ಬಳಸಲು ಅವರ ಕುಟುಂಬದವರು ಅಧಿಕಾರ ನೀಡಿಲ್ಲ. ಕಾನೂನು ಪ್ರಕಾರ ಗಾಂಧೀಜಿಯ ಚಿತ್ರ ಬಳಸಲು ಅವಕಾಶವೇ ಇಲ್ಲ. ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್‌ ಮೋಜು ಮಸ್ತಿ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸಿ ಹೋರಾಟ ಮಾಡುತ್ತದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *