Saturday, December 27, 2025
Menu

ವೋಟ್‌ ಕದ್ದು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಹೆಚ್‌ಡಿಕೆ ಆರೋಪ

ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವೋಟ್ ಚೋರಿ ಮೂಲಕವೇ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಎರ್ನಾಕುಲಂ – ಕೆಎಸ್ ಆರ್ ಬೆಂಗಳೂರು ನಡುವೆ ಹೊಸದಾಗಿ ಆರಂಭವಾಗಿರುವ ವಂದೇ ಭಾರತ್ ರೈಲಿಗೆ ಸ್ವಾಗತ ಕೋರಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಬಿಜೆಪಿ ವೋಟ್ ಚೋರಿಯಿಂದಲೇ ಗೆದ್ದಿದೆ ಸಿಎಂ, ಡಿಸಿಎಂ ಆರೋಪ ಮಾಡಿರುವುದು ಸರಿಯಲ್ಲ. ನಿಜಕ್ಕೇ ಆರೋಪ ಮಾಡಿರುವವರೇ ವೋಟ್ ಚೋರಿ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಅಧಿಕಾರಕ್ಕೆ ಬಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗಾದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಬರುತ್ತೆ ಎಂದು ಅಷ್ಟು ನಿಖರವಾಗಿ ಹೇಗೆ ಹೇಳಿದರು? ಆ ಸಂಖ್ಯೆ ಅವರಿಗೆ ಹೇಗೆ ಗೊತ್ತಿತ್ತು? ಯಾವ ಆಧಾರದಲ್ಲಿ 136 ಸೀಟು ಬರುತ್ತೆ ಅಂತ ಹೇಳಿದರು? ಮತ ಕಳ್ಳತನ ಮಾಡಿರುವುದೇ ಕಾಂಗ್ರೆಸ್ ಪಕ್ಷ. ಈಗ ನೋಡಿದರೆ ಮೋದಿ ಅವರನ್ನು ಟೀಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿಗೆ 67 ಸೀಟು ಬಂದು ನಿಲ್ಲೋಕೆ ಚೋರಿ ಚೋರಿ ಮಾಡಿದ್ರಾ? ಕಾಂಗ್ರೆಸ್ ನವರು ಜನರನ್ನು ಯಾಮಾರಿಸಿ ಈ‌ ರೀತಿಯ ವ್ಯರ್ಥ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ. ರಾಜ್ಯದಲಿ ಅನೇಕ ಗಂಭೀರ ಸಮಸ್ಯೆಗಳನ್ನು ಜನ ಎದುರಿಸುತ್ತಿದ್ದಾರೆ. ಅದರ ಬಗ್ಗೆ ಇವರ ಗಮನ ‌ಇರಬೇಕು ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಸಿಎಂ, ಡಿಸಿಎಂ ಜಂಟಿ ಪತ್ರಿಕಾಗೋಷ್ಠಿ ಅಂತ ಯಾರೋ ಹೇಳಿದರು. ನಾನೇನೋ ಯಾವುದೋ ಭಾರೀ ವಿಷಯ ಇರಬೇಕು ಎಂದುಕೊಂಡಿದ್ದೆ. ಆದರೆ ಸತ್ಯವಲ್ಲದ ವೋಟ್ ಚೋರಿ ಬಗ್ಗೆ ಇವರಿಬ್ಬರೂ ಮಾಧ್ಯಮಗೋಷ್ಠಿ ನಡೆಸಿರುವುದು ಸಣ್ಣತನ ಅಷ್ಟೇ. ಸಿಎಂ,‌ಡಿಸಿಎಂ ಸಣ್ಣತನವನ್ನು ರಾಜ್ಯದ ಜನರು ನೋಡಿದ್ದಾರೆ. ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ‌ಇಂತಹ ವಿಷಯ ಇಟ್ಟುಕೊಂಡು ಹೋಗ್ತಾ ಇದ್ದಾರೆ. ಕಾಂಗ್ರೆಸ್ ನವರನ್ನು ನಾಡಿನ ಜನ ಶಾಶ್ವತವಾಗಿ ಮನೆಗೆ ‌ಕಳಿಸುವ ದಿನ ದೂರ ಉಳಿದಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ವಂದೇ ಭಾರತ್ ರೈಲು ಸ್ವಾಗತ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಅಭಿವೃದ್ಧಿ ವಿಷಯಗಳ ಕಡೆ ಗಮನ ಕೊಡಲು ಅವರಿಗೆ ಸಮಯ ಇಲ್ಲ.ವೋಟ್ ಚೋರಿ ವಿಷಯದಲ್ಲಿ ಬ್ಯುಸಿ ಇದ್ದಾರೆ ಅವರು ಇಂದು ಲೇವಡಿ ಮಾಡಿದರು.

ವೋಟ್ ಚೋರಿ ಅನ್ನುವುದು ಕಾಂಗ್ರೆಸ್ ಪ್ರಚಾರಕ್ಕಾಗಿ ಸೃಷ್ಟಿಸಿರುವ ದೊಡ್ಡ ಸುಳ್ಳು. ಇಂತಹ ಕ್ಷುಲ್ಲಕ ವಿಷಯಗಳನ್ನೇ ಇಟ್ಟುಕೊಂಡು ಎರಡೂವರೆ ವರ್ಷ ಕಾಲಹರಣ ಮಾಡಿದ್ದಾರೆ. ಮುಂದಿನ ಎರಡೂವರೆ ವರ್ಷವೂ ಇವರು ಬೇರೆ ಏನು ಮಾಡೋಕೆ ಆಗೊಲ್ಲ. ಮಾಡುವುದೂ ಇಲ್ಲ ಎಂದು ಅವರು ಹೇಳಿದರು.

ರಾಜ್ಯದ ಖಜಾನೆ ಖಾಲಿ ಆಗಿದೆ. ಖಾಲಿ ಆಗಿರುವ ಖಜಾನೆ ಹೇಗೆ ತುಂಬಿಸಬೇಕು ಅಂತ ನಿನ್ನೆ (ಶುಕ್ರವಾರ) ಸಭೆ ಮಾಡಿದ್ದಾರೆ. ಜನರ ಮೇಲೆ ಪದೇ ಪದೇ ತೆರಿಗೆ ವಿಧಿಸುವ ಮೂಲಕ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಯಾವಾಗಲೂ ಜನರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಾನು ಅನೇಕ ಬಾರಿ ಹೇಳಿದ್ದೇನೆ. ತಪ್ಪು ತಿದ್ದಿಕೊಂಡು ಕೆಲಸ ಮಾಡಿ ಅಂತ. ಆದರೂ ಅವರಿಗೆ ಬುದ್ದಿ ಬಂದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕುಮಾರಸ್ವಾಮಿ ಅವರು ಹರಿಹಾಯ್ದರು.

Related Posts

Leave a Reply

Your email address will not be published. Required fields are marked *