Tuesday, November 11, 2025
Menu

ಕೆಪಿಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ, ಕೌಶಲ್ಯ ತರಗತಿ: ಸಚಿವ ಮಧು ಬಂಗಾರಪ್ಪ

madhu bangarappa

ಬೆಂಗಳೂರು: ಕೆಪಿಎಸ್ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಮತ್ತು 6ನೇ ತರಗತಿಯಿಂದ ಕೌಶಲ್ಯ ಅಭಿವೃದ್ಧಿ (ಸ್ಕಿಲ್) ತರಗತಿ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ದೇಶದ ಪ್ರಥಮ ಶಿಕ್ಷಣ ಸಚಿವರಾದ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಮಕ್ಕಳಿಗೆ ಬಟ್ಟೆ, ಊಟ, ಪುಸ್ತಕ, ಮತ್ತು ಉಚಿತ ಬಸ್ ಸೌಕರ್ಯ ದೊರೆಯಲಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಪೌಷ್ಟಿಕತೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಹಿಂದೆ ಕೇವಲ 308 ಇದ್ದ ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಸಂಖ್ಯೆಯನ್ನು ತಮ್ಮ ಸರ್ಕಾರ ಒಂದೇ ಬಾರಿಗೆ 900ಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಸುಮಾರು 6,000 ಗ್ರಾಮ ಪಂಚಾಯತಿಗಳಲ್ಲಿ ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಸಚಿವರು ತಿಳಿಸಿದರು.

ಶಿಕ್ಷಣಕ್ಕೆ ಹೆಚ್ಚು ಬಜೆಟ್ (ಸುಮಾರು 45,000 ಕೋಟಿ ರೂ.) ಖರ್ಚು ಮಾಡುತ್ತಿರುವ ಶಿಕ್ಷಣ ಇಲಾಖೆಯು, ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಶಿಕ್ಷಣಕ್ಕೆ ಒತ್ತು ನೀಡಲಿದೆ. ದೇಶದ ಆಸ್ತಿಯಾಗಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ದೇಶವು ಪ್ರಗತಿಯತ್ತ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಅವರು ಮನವಿ ಮಾಡಿದರು.

ಶಿಕ್ಷಣಕ್ಕೆ ‘ಬೌಂಡರಿ’ ಇರಬಾರದು

ಶಿಕ್ಷಣವು ಯಾವುದೇ ಜಾತಿ, ಧರ್ಮ, ಅಥವಾ ಭೌಗೋಳಿಕ ಗಡಿಗಳನ್ನು ಮೀರಿದ “ಬೌಂಡರಿಲೆಸ್” ವಿಷಯವಾಗಿದ್ದು, ದೇಶದ ಪ್ರಗತಿಗೆ ಶಿಕ್ಷಣವೇ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು.

“ಶಿಕ್ಷಣ ಸಚಿವನಾಗಿ, ಇಡೀ ದೇಶಕ್ಕೆ ಶೈಕ್ಷಣಿಕವಾಗಿ ಹೆಚ್ಚು ಒತ್ತನ್ನು ನೀಡಿದ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನು ಶಿಕ್ಷಣ ದಿನಾಚರಣೆಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಈ ದಿನಾಚರಣೆಗೆ ಗೌರವ ಸಲ್ಲಬೇಕಾದರೆ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮಾತನಾಡಿದ ಅವರು, “ನಾನು ಸಚಿವನಾದ ತಕ್ಷಣ ಪಠ್ಯಪುಸ್ತಕ ಪರಿಷ್ಕರಣೆಗೆ ಸಹಿ ಹಾಕಿದ್ದೇನೆ. ಮಕ್ಕಳಿಗೆ ಶಿಕ್ಷಣ ಇರಬೇಕೇ ಹೊರತು, ಪಠ್ಯಪುಸ್ತಕದಲ್ಲಿ ಯಾವುದೇ ಜಾತಿ-ಧರ್ಮಕ್ಕೆ ಸಂಬಂಧಿಸಿದ, ದಾರಿ ತಪ್ಪಿಸುವ ವಿಚಾರಗಳಿಗೆ ಅವಕಾಶ ನೀಡಬಾರದು ಎಂಬ ದೃಢ ನಿಲುವು ನಮ್ಮದಾಗಿದೆ. ಈ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

Related Posts

Leave a Reply

Your email address will not be published. Required fields are marked *