ಕಳ್ಳತನ ಪ್ರಕರಣಗಳಲ್ಲಿ ಚಿನ್ನ ರಿಕವರಿ ಮಾಡಿರುವ ಪೊಲೀಸರು ಆ ಚಿನ್ನವನ್ನು ವಾರಸುದಾರರಿಗೆ ಹಿಂತಿರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ಈ ಸಂಬಂಧ ದೂರು ದಾಖಲಾಗಿದೆ. ಕೇಂದ್ರ ವಲಯ ಐಜಿ ಲಾಬೂರಾಮ್ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಈ ಬಗ್ಗೆ ದೂರು ನೀಡಿದ್ದಾರೆ.
ದೂರನ್ನು ಪರಿಗಣಿಸಿ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ವಿರುದ್ಧ ಹೆಚ್ಚುವರಿ ಎಸ್ಪಿ ನೇತೃತ್ವದದಲ್ಲಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಸುಧಾಕರನ್ ಮತ್ತು ಗ್ಯಾಂಗ್ ಅನ್ನು ಸಂಜೀವ್ ಕುಮಾರ್ ಮಹಾಜನ್ ಬಂಧಿಸಿದ್ದರು. ಕಳ್ಳರ ಜೊತೆ ಚಿನ್ನ ಖರೀದಿಸಿದ್ದ ಆರೋಪಿಗಳೂ ಸಿಕ್ಕಿದ್ದರು.
ಆರೋಪಿಗಳು ಕದ್ದಿದ್ದ ಎರಡು ಕೆಜಿ ಚಿನ್ನದಲ್ಲಿ 200 ಗ್ರಾಂಗಳಷ್ಟನ್ನು ಮಾತ್ರ ಸರ್ಕಾರಕ್ಕೆ ಮತ್ತು ಚಿನ್ನ ಕಳೆದುಕೊಂಡವರಿಗೆ ತೋರಿಸಲಾಗಿದೆ. ಉಳಿದ ಚಿನ್ನವನ್ನು ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯೇ ಹಂಚಿಕೊಂಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಚಹಾ ಕುಡಿಯುತ್ತಿದ್ದ ಕ್ಯಾಬ್ ಚಾಲಕರ ಮೇಲೆ ಹಲ್ಲೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಶೆಟ್ಟಿಗೆರೆಯಲ್ಲಿ ಕಾರು ನಿಲ್ಲಿಸಿ ರಸ್ತೆಬದಿ ಅಂಗಡಿಯಲ್ಲಿ ಚಹಾ ಕುಡಿಯುತ್ತಿದ್ದ ಇಬ್ಬರು ಕ್ಯಾಬ್ ಚಾಲಕರ ಮೇಲೆ 10ಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದಾಳಿಗೊಳಗಾದ ಚಾಲಕರನ್ನು ಜ್ಞಾನಭಾರತಿ ಬಳಿಯ ಮರಿಯಪ್ಪನ ಪಾಳ್ಯದ ಕೆ.ಎಸ್. ಬಸವರಾಜು (37) ಮತ್ತು ಕೆ.ಎಸ್. ಲೇಔಟ್ 1ನೇ ಹಂತದ ಜನಾರ್ದನ್ (29) ಎಂದು ಗುರುತಿಸಲಾಗಿದೆ. ಒಂದು ಕಾರಿನ
ವಿಂಡ್ ಶೀಲ್ಡ್ ಗಳು ಸಂಪೂರ್ಣವಾಗಿ ಹಾನಿಗೊಂಡಿದೆ. ಇಬ್ಬರೂ ಚಾಲಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.